ವಿಶ್ವದ ಸಾಂಸ್ಕೃತಿಕ ನಾಯಕ ಬಸವೇಶ್ವರ

03 SARAG 2
ಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಕೂರಿಸಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಶ್ರೀ ಡಾ. ಷಡಕ್ಷರಿ ಸ್ವಾಮೀಜಿ, ಶ್ರೀ ತೋಂಟದಾರ್ಯ ಸ್ವಾಮೀಜಿ, ಮಲ್ಲಿಕಾರ್ಜನ್,ಪ್ರಕಾಶ್ ಚಂದ್ರ, ರವಿಕುಮಾರ್ ಇದ್ದರು.
Published on

ಸರಗೂರು: ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ. ಇಡೀ ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರ ವಿಶ್ವಮಾನವ ತತ್ವಗಳನ್ನು ಜನರಿಗೆ ತಿಳಿಸುವುದರಿಂದ ಈ ದಿನದ ಸಾರ್ಥಕತೆಯನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ ಎಂದು ದಡದಹಳ್ಳಿ ಮಠಾಧೀಶ ಶ್ರೀಷಡಕ್ಷರಿ ಸ್ವಾಮೀಜಿ ತಿಳಿಸಿದರು.

ಬಸವ ಜಯಂತಿ ಪ್ರಯುಕ್ತ ತಾಲೂಕಿನ ಎಂ.ಸಿ. ತಳಲು ಗ್ರಾಮದಲ್ಲಿ ಶುಕ್ರವಾರ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಜಾಗತಿಕ ಧರ್ಮದ ಸಾಲಿನಲ್ಲಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಇದು ಅವರನ್ನು ವಿಶ್ವಗುರುವನ್ನಾಗಿಸಿದೆ ಎಂದು ಹೇಳಿದರು.

ಹಂಚೀಪುರ ಕಿರಿಯ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನ ಮುಂದಾಳತ್ವದಲ್ಲಿ ಜಾತಿ ವ್ಯವಸ್ಥೆ ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಹೋರಾಟ ನಡೆದವು. ಇಂದಿನ ಯುವ ಪೀಳಿಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಬೆಳ್ಳಿರಥದಲ್ಲಿ ಬಸವಣ್ಣನವರ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ಸಲ್ಲಿಸಿದರು. ಮಂಗಳವಾದ್ಯಗಳು ಮೂಲಕ ಪ್ರಮುಖ ಬೀದಿಗಳಲ್ಲಿ ನಂದಿಧ್ವಜ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು.

ಗ್ರಾಪಂ ಸದಸ್ಯ ಪ್ರಕಾಶ್ ಚಂದ್ರ, ಗೌಡಿಕೆ ಮಹದೇವಪ್ಪ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್, ರವಿಕುಮಾರ್, ಮಹೇಶ್ ಕುಮಾರ್, ಎಂ.ಡಿ.ಪ್ರತಾಪ್, ಶಿವಕುಮಾರ್, ಸಿದ್ದರಾಜು, ಎಂ.ಡಿ.ದೇವಣ್ಣ, ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net