

ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ನಿಡುವಣಿ ಗ್ರಾಮದಲ್ಲಿನ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಗೊಂಡಿದ್ದು, ಫೆ.24 ರಂದು ಲೋಕಾರ್ಪಣೆಗೊಳ್ಳಲಿದೆ.
ಫೆ.21 ರಂದು ಸಂಜೆ 4.30ಕ್ಕೆ ಗ್ರಾಮದ ಮಹಿಳೆಯರು ಗಂಗಾಪೂಜೆ, ಬಸವೇಶ್ವರ ಶಿಲಾಮೂರ್ತಿಯ ಭವ್ಯ ಮೆರವಣಿಗೆ ಮೂಲಕ ದೇವಾಲಯ ಪ್ರವೇಶಿಸಲಿದ್ದಾರೆ. ನಂತರ ಪೂಜಾ ವಿಧಿವಿಧಾನಗಳು ನಡೆಯಲಿದೆ. 22ರಂದು ಬೆಳಗ್ಗೆ 7 ಗಂಟೆಗೆ ಬಾಳೆಹೊನ್ನೂರು ತೆಂಡೇಕೆರೆ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರಕ್ಷಾಬಂಧನ, ಧರ್ಮನಾಂದಿ ದ್ವಜಾರೋಹಣ, ಅಸ್ತ್ರರಾಜಪೂಜೆ, ಮತ್ಸಂಗ್ರಹಣ, ಅಂಕುರಾರೋಪಣ, ಪಂಚಗವ್ಯ ಅಭಿಷೇಕ, ಗಣಪತಿ ಹೋಮ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
23ರಂದು ಬೆಳಗ್ಗೆ 6 ಗಂಟೆಗೆ ಶಿವಯಾಗ ಮಂಟಪ ಪ್ರತಿಷ್ಠೆ, ನವಗ್ರಹ, ಮೃತ್ಯುಂಜಯ ಏಕಾದಶರುದ್ರ, ದ್ವಾದಶದಿತ್ಯಾ ಸ್ಕಂದ, ಅಷ್ಟಲಕ್ಷ್ಮೀ ಸಮೇತ ಲಕ್ಷ್ಮೀನಾರಾಯಣ, ಉಮಾ ಮಹೇಶ್ವರ ಪ್ರಧಾನ, ಬಸವೇಶ್ವರರರ ಕಲಶಾರಾಧನೆ, 10.30 ರಿಂದ ವಿವಿಧ ಬಗೆಯ ಹೋಮ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. 24ರಂದು ಬೆಳಗ್ಗೆ 4.30ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ, 6.30 ರಿಂದ ರುದ್ರಾಭಿಷೇಕ, ಕಲಾಹೋಮ, ಗ್ರಾಮದೇವತಾ, ಇಷ್ಟದೇವತಾ, ಜಯಾದಿ ಪ್ರಾಯಶ್ಚಿತ್ತ ಹೋಮ, ಶಿಖರ ಕಲಶಾರೋಹಣ, ಪೂರ್ಣಾಹುತಿ, ದೃಷ್ಟಿ ಪೂಜೆ, ಮಂತ್ರೋಪದೇಶಗಳು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ತೆಂಡೇಕೆರೆ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಮೈಸೂರಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಸಿ. ಬಸವರಾಜು ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಡಾ.ಮೊರಬದ ಮಲ್ಲಿಕಾರ್ಜುನ ಹಾಗೂ ನಂದೀಶ್ ಹಂಚೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಎ.ಮಂಜು, ಎಚ್.ಡಿ.ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಭಾಗವಹಿಸಲಿದ್ದಾರೆ. ರಾತ್ರಿ 8.30 ರಿಂದ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.