ಬಸವಣ್ಣನವರಿಂದ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ: ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ್ ಅಭಿಮತ

Prakash
Published on

ಮಂಡ್ಯ: ಸಮಾಜದಲ್ಲಿ ಬದುಕುವವರೆಲ್ಲರೂ ದುಡಿದು ತಿನ್ನುವ ಮೂಲಕ ಬಸವಣ್ಣ ಅವರ ತತ್ವದಂತೆ ಕಾಯಕವೇ ಕೈಲಾಸ ಎಂಬುದನ್ನೂ ಪಾಲಿಸಬೇಕು ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ್ ಸಲಹೆ ನೀಡಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಾಂತಿಯೋಗಿ ಬಸವೇಶ್ವರ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲೇ ಬಸವಣ್ಣನವರು ಸಹಕಾರಿ ತತ್ವದಡಿ ಆರ್ಥಿಕಾಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಅದರ ಮುಂದಿನ ಭಾಗವಾಗಿ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಇದೀಗ ಕೇಂದ್ರ ಸರ್ಕಾರವೂ ಸಹ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಸಹಕಾರಿ ಇಲಾಖೆಯನ್ನು ಸ್ಥಾಪಿಸಿ ದೇಶಾದ್ಯಂತ ಅದರ ಬೆಳವಣಿಗೆಗೆ ನಾಂದಿ ಹಾಡಲಾಗಿದೆ ಎಂದು ಹೇಳಿದರು.
ಕೊಡು ಕೊಳ್ಳುವುದು ಸಹಕಾರಿ ತತ್ವ. ಇದರಿಂದ ಬಹಳಷ್ಟು ರೈತರು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದನ್ನು ಗಮನಿಸಿದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೇಂದ್ರದಲ್ಲೂ ಇದನ್ನು ಅಳವಡಿಸಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಸಹಕಾರಿ ಇಲಾಖೆಯ ಮಾದರಿಯನ್ನು ಅನುಕರಣೆ ಮಾಡಿದ್ದಾರೆ. ನಮ್ಮ ಸಂಘ ಉತ್ತಮವಾಗಿ ನಡೆಯುತ್ತಿದೆ. ಇಲ್ಲಿ ಎಲ್ಲರೂ ನೌಕರರಾಗಿರುವ ಕಾರಣ ಆರ್ಥಿಕ ಚಟುವಟಿಕೆ ಅಭಿವೃದ್ಧಿ ಪಥದತ್ತ ಸಾಗಿದೆ. ಇದೇ ರೀತಿ ಮುಂದುವರಿದು ಸದಸ್ಯರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚನ್ನರಾಜು, ವಕೀಲ ಮಲ್ಲಿಕಾರ್ಜುನಸ್ವಾಮಿ, ಸಿಇಒ ಬೆಳ್ಳಪ್ಪನವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net