

ರಬಕವಿ/ಬನಹಟ್ಟಿ: ರಬಕವಿ ನಗರದ ಆರಾಧ್ಯ ದೈವ ಶ್ರೀ ಗಟ್ಟಗಿ ಬಸವೇಶ್ವರ ರಥೋತ್ಸವ ದೀಪಾವಳಿ ಕಡಿಪಾಢ್ಯದಂದು ಬುಧವಾರ ರಾತ್ರಿ 8 ಗಂಟೆಗೆ ಅದ್ದೂರಿಯಾಗಿ ನಡೆಯಿತು.
ರಾತ್ರಿ 8ಕ್ಕೆ ಹೂ, ಹಾರಗಳಿಂದ ಸಿಂಗಾರಗೊಂಡ ತೇರು ದೇವಸ್ಥಾನ ಆವರಣದಿಂದ ಉೆ ಉೇ ಎಂಬ ಭಕ್ತಿ ಘೋಷಗಳೊಂದಿಗೆ ನಗರದ ಹೊಸಪೇಟೆ ಓಣಿ, ಈಶ್ವರ ಸಣಕಲ್ ರಸ್ತೆ ಮೂಲಕ ಶಂಕರಲಿಂಗ ದೇವಸ್ಥಾನ ವೃತ್ತ ಬಳಿ ಆಗಮಿಸಿ ರಾತ್ರಿ 9 ಗಂಟೆಗೆ ಸಂಪನ್ನಗೊಂಡಿತು.
ಮಾರ್ಗದುದ್ದಕ್ಕೂ ಭಕ್ತರು ಭಕ್ತಿಯಿಂದ ಬೆಂಡ, ಬೆತ್ತಾಸು, ಬಾಳೆಹಣ್ಣುಗಳನ್ನು ತೇರಿನ ಮೇಲೆ ಎಸೆದು ಭಕ್ತಿ ಮೆರೆದರು.
ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ ನಡೆದವು. ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದಿಂದಲೇ ಕರಡಿ ಮಜಲು, ಸಂಬಾಳವಾದನ, ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿ ವಿವಿಧ ಜಾನಪದ ಕಲಾತಂಡಗಳ ವಾದ್ಯ ಮೊಳಗಿದವು.
ವಿಶೇಷವಾಗಿ ಈ ಬಾರಿ ಜಾತ್ರೆ 201ನೇ ವರ್ಷದ್ದಾಗಿದ್ದರಿಂದ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಎಲ್ಲ ಸಮಾಜದ ಹಿರಿಯರನ್ನು ಜಾತ್ರೆಗೆ ಆಹ್ವಾನಿಸಲಾಗಿತ್ತು. ತೇರಿಗೆ ಪೂಜೆ ಸಲ್ಲಿಸಿದ ಬಳಿಕ ತೇರಿನಲ್ಲಿ ಬಸವಣ್ಣ ಹಾಗೂ ವೀರಭದ್ರದೇವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ಯಂಡಿಗೇರಿ ಸೇರಿ ರಬಕವಿ, ಬನಹಟ್ಟಿ, ಹೊಸೂರ, ರಾಂಪುರ ನಗರಗಳ ಅನೇಕ ಹಿರಿಯರು, ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಬುಧವಾರ ರಾತ್ರಿ 10 ಗಂಟೆಗೆ ಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.