

ಮಂಡ್ಯ: ನಮ್ಮ ಸಂಸ್ಥೆ ಸ್ಥಾಪನೆಯಾಗಿ 14 ವರ್ಷ ಕಳೆದಿದೆ. ಷೇರು, ಠೇವಣಿಗಳ ಸಂಗ್ರಹ, ಸಾಲ ವಿತರಣೆ ಹಾಗೂ ವಸೂಲಾತಿ, ಮತ್ತು ಚಿಟ್‌ಫಂಡ್‌ಗಳಂತಹ ಉತ್ತಮ ಸಾಧನೆ ಮಾಡಿದ ಫಲವಾಗಿ ಪ್ರಸ್ತುತ ಸಾಲಿನಲ್ಲಿ 1.13 ಕೋಟಿ ರೂ ಲಾಭ ಗಳಿಸಿದೆ ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಹೇಳಿದರು.
ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ 14ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಒಟ್ಟಾರೆ ಸಂಘದಲ್ಲಿ 34 ಕೋಟಿ ರೂ ವ್ಯವಹಾರ ನಡೆದಿದೆ. ಅಂತೆಯೇ ಬೇವುಕಲ್ಲು ಹಾಗೂ ಕೆ.ಎಂ.ದೊಡ್ಡಿಯಲ್ಲಿ ಶಾಖಾ ಕಚೇರಿ ಪ್ರಾರಂಭಿಸಲಾಗಿದೆ ಎಂದರು.
ಬೇಬಿ ಬೆಟ್ಟದ ಶಿವಬಸವ ಸ್ವಾಮೀಜಿ, ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ ಇತರರಿದ್ದರು. ಹದಿನಾಲ್ಕು ಮಹಿಳಾ ಸದಸ್ಯರಿಂದ 14 ದೀಪ ಬೆಳಗಿಸುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಯಿತು. 14 ಜನ ಸದಸ್ಯರಿಗೆ ಸಹಕಾರಿ ಬಂಧು ಪ್ರಶಸ್ತಿ ನೀಡಲಾಯಿತು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು. ಮುಖ್ಯ ಕಾರ್ಯನಿರ್ವಾಹಕ ಡಿ.ಮಹೇಶ್‌ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಸದಸ್ಯರ ಒಪ್ಪಿಗೆ ಮೇರೆಗೆ ಡಿವಿಡೆಂಡ್ ಅನ್ನು ಕಟ್ಟಡ ನಿಧಿಗೆ ವರ್ಗಾಯಿಸಲಾಯಿತು.