ಬಸವೇಶ್ವರ ಜಯಂತಿ ಆಚರಣೆ 30ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏ.30ರಂದು ಸಂಜೆ 5 ಗಂಟೆಗೆ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನು ಆಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರ ಜಯಂತಿ ನಿಮಿತ್ತ ಏ. 30ರಂದು ಬೆಳಗ್ಗೆ 9 ಗಂಟೆಗೆ ಕಲಾಭವನ ಆವರಣದಲ್ಲಿನ ಶ್ರೀ ಬಸವೇಶ್ವರ ಪ್ರತಿಮೆಗೆ ಹಾಗೂ ಪಾಲಿಕೆ ಬಳಿಯ ಡಾ. ಬಿ.ಆರ್. ಅಂಬೇಡ್ಕರ್​ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಲಿದ್ದಾರೆ. ಉಳವಿ ಚನ್ನಬಸವೇಶ್ವರ ಟ್ರಸ್ಟ್​ವತಿಯಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಬೆಳಗ್ಗೆ 10 ಗಂಟೆಗೆ ದೇವಸ್ಥಾನದಿಂದ ಆರಂಭವಾಗಿ ಮುರಘಾಮಠಕ್ಕೆ ತಲುಪಲಿದೆ. ನಂತರ ಮೆರಣಿಗೆಯು ಆಲೂರು ವೆಂಕಟರಾವ್​ ವೃತ್ತದ ಮೂಲಕ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಮರಳಲಿದೆ ಎಂದರು.

ವೇದಿಕೆ ಕಾರ್ಯಕ್ರಮ ಆಲೂರು ವೆಂಕಟರಾವ್​ ಭವನದಲ್ಲಿ ಸಂಜೆ 5 ಗಂಟೆಗೆ ಆರಂಭವಾಗಲಿದೆ. ವಚನ ಗಾಯನ, ವಿಶೇಷ ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾಜದ ಹಿರಿಯ ಮುಖಂಡರು, ಸಾರ್ವಜನಿಕರು, ಇತರರು ಇದ್ದರು. ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net