

ಮಂಡ್ಯ: ಸಾಹಿತ್ಯದ ಸಹವಾಸ ಬದುಕನ್ನು ಸಹ್ಯವಾಗಿಸುತ್ತದೆ. ಜತೆಗೆ ಸಮಾಜದ ವೈರುಧ್ಯಗಳಿಗೆ ಮದ್ದಾಗಿದೆ ಎಂದು ಪತ್ರಕರ್ತ ದ.ಕೋ ಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಬಂದೀಗೌಡ ಬಡಾವಣೆಯ ಕಸಾಪ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ಮಂಡ್ಯ ತಾಲೂಕು ಘಟಕದಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಕವಿ ಕೆ.ಎನ್.ಪುರುಷೋತ್ತಮ ಅವರ ’ಚಕ್ರತೀರ್ಥ’ ಕೃತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಗೊಂದಲ ಅಶಾಂತಿ ಹೆಚ್ಚಾಗಿದೆ. ಸಾಹಿತ್ಯದಿಂದ ನಾವು ವಿಮುಖರಾಗುತ್ತಿರುವುದು ಇದಕ್ಕೆ ಕಾರಣ. ರಾಜಕೀಯ ಚಟುವಟಿಕೆಗಳು ಅಭಿವೃದ್ಧಿ ಚಿಂತನೆಗಳನ್ನು ಬಿಟ್ಟು ಜನರನ್ನು ಭಾವಾವೇಶಕ್ಕೆ ಒಳಗಾಗಿಸಿ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಸಾಹಿತ್ಯ ಅಪ್ಪಿಕೊಳ್ಳದ ಕಾರಣದಿಂದ ಭಾವಾವೇಶಗಳು ವಿಜೃಂಭಿಸುತ್ತಿವೆ ಎಂದರು.
ಸಾಹಿತ್ಯ ಒಳ್ಳೆಯ ಭಾವನೆ ಮತ್ತು ವ್ಯಕ್ತಿತ್ವ ರೂಪಿಸುವುದರಿಂದ ಸಾಹಿತ್ಯವನ್ನು ಹೆಚ್ಚೆಚ್ಚು ಒಪ್ಪಿ ಅಪ್ಪಿಕೊಳ್ಳಬೇಕು. ಸಮಾಜದ ಆರೋಗ್ಯಕ್ಕೆ ಅಥವಾ ಅನಾರೋಗ್ಯಕ್ಕೆ ಸಾಹಿತ್ಯ ಕಾರಣ. 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಸಾಮಾಜಿಕ ಕ್ರಾಂತಿ,ಅವರು ರಚಿಸಿದ ವಚನಗಳು ನಮ್ಮ ಭಾವನೆಗಳನ್ನು ಶುದ್ಧಿ ಮಾಡುವ ಮದ್ದಾಗಿವೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಮದ್ದು ಇದಾಗಿದೆ. ನಿಜವಾದ ಸಾಹಿತ್ಯ ಜನರ ಬಳಿ ಹೆಚ್ಚು ಹೆಚ್ಚು ಹೋಗಬೇಕು. ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕವಿ ಕೆ.ಎನ್.ಪುರುಷೋತ್ತಮ ಅವರು ತಮ್ಮ ಸುತ್ತಮುತ್ತಲಿನ ಸಮಾಜದ ಆಗುಹೋಗುಗಳನ್ನು ಗಮನಿಸಿ ಅಲ್ಲಿನ ತಲ್ಲಣಗಳಿಗೆ ಸ್ಪಂದಿಸಿದ್ದಾರೆ. ತಮ್ಮನ್ನು ತಾವೇ ವಿಮರ್ಶೆಗೆ ಒಳಗಾಗಿಸಿಕೊಂಡು ಆರೋಗ್ಯಕರವಾಗಿದ್ದಾರೆ. ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿ ಅವನ್ನು ಸಂಗ್ರಹಿಸಿ ಅವುಗಳನ್ನು ರಸಪಾಕವಾಗಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಸಾಮಾಜಿಕ ಹರಿಕಾರ ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿದ್ದ ಮೇಲು-ಕೀಳು, ಬಡವ-ಬಲ್ಲಿದ, ಗಂಡು-ಹೆಣ್ಣು ಎಂಬ ಸಾಮಾಜಿಕ ಅಂತರವನ್ನು ವಿರೋಧಿಸಿದವರು. ಬಸವಣ್ಣನವರ ಒಂದೊಂದು ವಚನಗಳು ಕೂಡ ಪ್ರಪಂಚ ಇರುವವರೆಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಿ ನಿಲ್ಲುತ್ತವೆ. ಪ್ರಪಂಚ ಇರುವ ತನಕ ಅವರ ವಚನಗಳು ಇರುತ್ತವೆ ಎಂದರಲ್ಲದೇ ಹಲವು ಪ್ರಮುಖ ವಚನಗಳನ್ನು ಉಲ್ಲೇಖಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಸಂಘ-ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಉಪಾಧ್ಯಕ್ಷ ಗುರುಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಸಾಹಿತಿಗಳಾದ ಮಧುಸೂದನ ಮದ್ದೂರು, ಭವಾನಿ ಲೋಕೇಶ್, ಕೊತ್ತತ್ತಿ ರಾಜು, ಕೃತಿಕಾರ ಪುರುಷೋತ್ತಮ್ ಉಪಸ್ಥಿತರಿದ್ದರು.