ಶಿರಂಗಾಲದಲ್ಲಿ ಬಸವೇಶ್ವರನೇ ಮೊದಲ ದೈವ

ಶಿರಂಗಾಲ  ಗ್ರಾಮ ದೇವರು ಬಸವೇಶ್ವರ ದೇವಾಲಯ.
ಶಿರಂಗಾಲ ಗ್ರಾಮ ದೇವರು ಬಸವೇಶ್ವರ ದೇವಾಲಯ.
Published on

ಸುಂಟಿಕೊಪ್ಪ: ಗ್ರಾಮದ ಒಳಿತಿಗಾಗಿ ಹಿರಿಯರು ಪ್ರತಿಷ್ಠಾಪಿಸಿದ ಶ್ರೀ ಬಸವೇಶ್ವರ ದೇವಾಲಯ ಕಾರ್ಣಿಕ ದೇವಸ್ಥಾನ ಎಂದೇ ಪ್ರಸಿದ್ಧಿಯಾಗಿದೆ. ನಂಬಿ ಬರುವ ಭಕ್ತರ ಹಿತಕಾಯುವ ದೈವ ನಂಬಿಕೆ ಭಕ್ತ ವಲಯದಲ್ಲಿ ಮೆನ ಮಾಡಿದೆ.

ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಾಲಯವನ್ನು ಆರು ದಶಕಗಳ ಹಿಂದೆಯೇ ಪ್ರತಿಷ್ಠಾಪಿಸಲಾಯಿತು ಎಂಬ ಮಾತಿದೆ. ದೇವರೇ ಇಲ್ಲದ ಶಿರಂಗಾಲ ಗ್ರಾಮದಲ್ಲಿ 6 ದಶಕಗಳ ಹಿಂದೆ ಗ್ರಾಮದ ಹಿರಿಯರಾದ ರಾಜಪ್ಪ ಮಾಸ್ಟರ್, ಎಚ್.ಡಿ.ನಂಜಪ್ಪ, ಗೋವಿಂದ ಅಮ್ಮನ ಪೊನ್ನಪ್ಪ, ಪನ್ಯ ಗೌರಮ್ಮ, ಶಾಂತಪ್ಪ, ರಾಮಣ್ಣ, ಚೊಕ್ಕಡಿ ಅಪ್ಪಯ್ಯ ಅವರ ನೇತೃತ್ವದ ತಂಡ ಗ್ರಾಮದ ನಿವಾಸಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಬಸವ ಮೂರ್ತಿಯನ್ನು ಪ್ರತಿಷ್ಠಾಪಿಸಿತು. ನಂತರ ನಿತ್ಯ ಗ್ರಾಮದಲ್ಲಿ ಪೂಜೆ ಕಾರ್ಯಕ್ಕೆ ಚಾಲನೆ ದೊರೆಯಿತು. ಭಕ್ತರ ವಿಶ್ವಾಸಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ದೇವಾಲಯ ನಿರ್ಮಾಣಗೊಂಡಿದ್ದು. 1 ವರ್ಷದಿಂದ ನಿತ್ಯ ಪೂಜೆ, ಅದ್ದೂರಿ ವಾರ್ಷಿಕೋತ್ಸವ, ವಿಶೇಷ ಪೂಜೆಗಳು ನಡೆಯುತ್ತಿವೆ.

ಬಸವೇಶ್ವರ ದೇವಾಲಯ ಸುತ್ತಲಿನ ಪ್ರದೇಶ ಸುಮಾರು 1.80 ಎಕರೆಯಿದ್ದು, 6 ದಶಕಗಳಿಂದ ಬಸವೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ದಿನಗಳು ಕಳೆದಂತೆ ಇಲ್ಲಿಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಸವೇಶ್ವರನ ಬಳಿಯಲ್ಲಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಸಲ್ಲಿಸುವ ವಾಡಿಕೆ ಇಂದಿಗೂ ಇದೆ. ಒಂದು ವೇಳೆ ನೋವು-ಸಂಕಷ್ಟಗಳು ಪರಿಹಾರಗೊಂಡಲ್ಲಿ ಬಸವೇಶ್ವರನ ಹೆಸರಿನಲ್ಲಿ ಭಕ್ತರು ಹರಕೆ ಹೊತ್ತುಕೊಳ್ಳಲಿದ್ದು, ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ತೀರಿಸುತ್ತಾರೆ. ಬಸವೇಶ್ವರನ ಕೃಪೆಯಿಂದ ನೋವು, ಸಂಕಷ್ಟಗಳು ಮರೆಯಾಗಿ ನೆಮ್ಮದಿಯ ಜೀವನ ಸಾಗುತ್ತಿರುವ ಜನರು ಇಂದಿಗೂ ಇಲ್ಲಿಗೆ ಬರುತ್ತಿದ್ದು, ದೇವಾಲಯಕ್ಕೆ ಹೊಸದಾಗಿ ಬರುವ ಭಕ್ತರಿಗೆ ಹರಕೆ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಾರೆ. ಹೀಗಾಗಿ ದಿನದಿಂದ ದಿನಕ್ಕೆ ಬಸವೇಶ್ವರನ ದೈವಿಕ ಪ್ರಭಾವ ಹೆಚ್ಚುತ್ತಿದೆ.

2019ರಲ್ಲಿ ಅಂದಾಜು 15 ರಿಂದ 18 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಯಿತು. ಆ ಬಳಿಕ ಕಳಂಚೇರಿ ಅರಮೇರಿಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದರು. ತಾವು ತಯಾರಿಸಿದ ಅಂದಾಜು ಪಟ್ಟಿಗಿಂತಲೂ ಜೀರ್ಣೋದ್ಧಾರ ಕಾಮಗಾರಿ ದುಪ್ಪಟಾಯಿತಾದರೂ ಬಸವೇಶ್ವರ ಕೃಪಕಟಾಕ್ಷದಿಂದ 35 ಲಕ್ಷ ರೂ. ವೆಚ್ಚದಲ್ಲಿ 5 ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು 2024 ರ ಜೂನ್‌ನಲ್ಲಿ ಶಾಂತಮಲ್ಲಿಕಾರ್ಜುನ ಶ್ರೀಗಳ ಸಾನ್ನಿಧ್ಯ, ನಾಗಮಂಗಲ ಅರ್ಚಕರ ನೇತೃತ್ವದಲ್ಲಿ ದೇವಾಲಯ ಲೋಕಾರ್ಪಣೆಗೊಂಡಿತು.

ಅರ್ಚಕ ಶೇಖರ್‌ಅಯ್ಯ ಅವರು ಪ್ರತಿದಿನ ಬಸವೇಶ್ವರ ದೇವಾಲಯದಲ್ಲಿ ಬೆಳಗ್ಗೆ 7ರಿಂದ 8 ಗಂಟೆ ಹಾಗೂ ಸಂಜೆ 6 ರಿಂದ 7 ಗಂಟೆವರೆಗೆ ಪೂಜೆ ಸಲ್ಲಿಸಲಿದ್ದಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ವಿಶೇಷ ಪೂಜೆ ನೆರವೇರಲಿದೆ. ಯುಗಾದಿ ಹಬ್ಬವಾದ 8 ದಿನಕ್ಕೆ ದೇವಾಲಯದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ನಾಕೂರು ಶಿರಂಗಾಲ, ಹೊಸಕೋಟೆ, ಗುಡ್ಡೆಹೊಸೂರು, ಕೊಡಗರಹಳ್ಳಿ, ಕಲ್ಲೂರು, ಸುಂಟಿಕೊಪ್ಪ, ಕುಶಾಲನಗರ, ಹರದೂರು ಹಾಗೂ ಕೆದಕಲ್ ಭಾಗಗಳ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ವಿಶೇಷ ಪೂಜೆ ನೆರವೇರಲಿದೆ.

ಶಿರಂಗಾಲ ಗ್ರಾಮದಲ್ಲಿ ದೇವಸ್ಥಾನವನ್ನು ಪ್ರತಿಷ್ಠಾಪಿಸಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದರು. ದೇವಾಲಯ ಹಳೆಯದಾಗಿದ್ದರಿಂದ ಸಮಿತಿ ಮತ್ತು ಗ್ರಾಮದ ಹಿರಿಯರು ನೂತನ ದೇವಾಲಯ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ ಮೇರೆಗೆ 2019 ರಲ್ಲಿ ಕಳಂಚೇರಿ ಅರಮೇರಿಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು. ಆ ಬಳಿಕ ಅಂದಾಜು ಪಟ್ಟಿ 2 ಪಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ ದಾನಿಗಳು, ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ 2024ರ ಜೂನ್‌ನಲ್ಲಿ ದೇವಾಲಯ ಲೋಕಾರ್ಪಣೆಗೊಂಡಿತು. ಹಿಂದಿನಿಂದಲೂ ಹಿರಿಯರು ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.

ಕೆ.ಆರ್.ಮಂಜುನಾಥ್ ಶಿರಂಗಾಲ ಗ್ರಾಮ

ದೇವಾಲಯಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ದೇವಾಲಯ ಒಂದು ಕಾರ್ಣಿಕವೇ ಆಗಿದ್ದು, ಭಕ್ತರ ಹಿತದೃಷ್ಟಿಯಿಂದ ಮೂಲಸೌಲಭ್ಯ ಕಲ್ಪಿಸುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರಿಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗಿದೆ.

ವಿಜೇತ್ ಅಧ್ಯಕ್ಷ, ಬಸವೇಶ್ವರ ದೇವಾಲಯ ಸಮಿತಿ

ನಮ್ಮ ಪೂರ್ವವಿಕರ ಕಾಲದಿಂದಲೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಸಂಕಷ್ಟಗಳನ್ನು ನಿವಾರಿಸಿಕೊಳ್ಳಲು ದೇವಾಲಯಕ್ಕೆ ಪೂರ್ಣ ಮನಸ್ಸಿನಿಂದ ಬರುವವರ ನೋವುಗಳು ಇಲ್ಲಿ ಪರಿಹಾರವಾಗಿವೆ. ಅನೇಕ ಭಕ್ತರ ಕೋರಿಕೆಗಳು ಈಡೇರಿದ ಬಗ್ಗೆ ಸಾಕ್ಷಿಯಿದೆ. ಈ ದೇವಾಲಯ ಕಾರ್ಣಿಕ ದೇವಾಲಯ ಎಂದೇ ಪ್ರಸಿದ್ಧಿಯಾಗಿದೆ.

ಯಶೋದಾ ಬಸವರಾಜ್ ದೇವಾಲಯದ ಭಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net