

ರಬಕವಿ-ಬನಹಟ್ಟಿ : ರಬಕವಿ ನಗರದ ಆರಾಧ್ಯ ದೇವ ಘಟ್ಟಗಿ ಬಸವೇಶ್ವರ ರಥೋತ್ಸವ ದೀಪಾವಳಿ ಕಡಿಪಾಢ್ಯದಿನ ಭಾನುವಾರ ರಾತ್ರಿ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಬಸವೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ಪೂಜೆ ಜರುಗಿದವು. ನಂತರ ನೂರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನೇಕ ಜಾನಪದ ಕಲೆಗಳ ಸಮಾರಂಭ ನಡೆಯಿತು. ಸಂಜೆ 7 ಗಂಟೆ ರಥೋತ್ಸವಕ್ಕೆ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಂಗಳರಾತಿ ನೆರವೇರಿಸಿ ಚಾಲನೆ ನೀಡಿದರು.
ಹರಹರ ಮಹಾದೇವ ಜಯಘೋಷಗಳು ಮೊಳಗುತ್ತಿದ್ದಂತೆ ರಥ ಬೀದಿಯಲ್ಲಿ ಸಾಗಿದ ರಥೋತ್ಸವವು ನಗರದ ಹೊಸಪೇಟ ಲೇನ್, ಈಶ್ವರ ಸಣಕಲ ರಸ್ತೆ ಮೂಲಕ ತೆರಳಿ ಶಂಕರಲಿಂಗ ದೇವಸ್ಥಾನ ಆವರಣಕ್ಕೆ ರಾತ್ರಿ 8.15 ಗಂಟೆಗೆ ತಲುಪಿ ಸಂಪನ್ನಗೊಂಡಿತು. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಿಡಿಮದ್ದುಗಳ ಕಲರವ ಜೋರಾಗಿತ್ತು.