ಬಸವೇಶ್ವರನಗರಕ್ಕೆ ಕಳ್ಳರ ಕಾಟ

kalla
Published on

ಹಾವೇರಿ: ಯಾಲಕ್ಕಿ ನಗರಿ ಹಾವೇರಿ ನಗರದ ಪ್ರತಿಷ್ಠಿತ ಬಡಾವಣೆ ಬಸವೇಶ್ವರ ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ರಾತ್ರಿ ಹೊತ್ತು ಕಳ್ಳರು ಮಾರಕಾಸ್ತ್ರ ಹಿಡಿದು ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ.

ಕಳೆದ ಒಂದೆರೆಡು ವಾರದ ಅವಧಿಯಲ್ಲಿ ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲೇ ಮೂರು ಮನೆಗಳಲ್ಲಿ ಕಳವಾಗಿದೆ. ಲಕ್ಷಾಂತರ ರೂ. ನಗ, ನಾಣ್ಯ ದೋಚಲಾಗಿದೆ. ಐದು ಮನೆಗಳಲ್ಲಿ ಕಳವಿಗೆ ಯತ್ನಿಸಲಾಗಿದೆ. ಕಳೆದ ವಾರ ಕಳ್ಳನೊಬ್ಬ ಕಂದ್ಲಿ ಹಿಡಿದು, ಮನೆಯೊಂದರ ಕಾಂಪೌಂಡ್ ಹಾರಿ ಕಳವಿಗೆ ಯತ್ನಿಸಿದ್ದ. ಸಂಶಯಗೊಂಡ ಮನೆಯವರು ಲೈಟ್ ಹಚ್ಚಿ, ಹೊರ ಬಂದ ಕೂಡಲೇ ಕಳ್ಳ ಕಂದ್ಲಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಇದರಿಂದ ಬಡಾವಣೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಜಿಲ್ಲಾ ಕೇಂದ್ರದ ಸುಸಜ್ಜಿತ ನಗರ ಎಂದು ಕರೆಸಿಕೊಳ್ಳುವ ಬಸವೇಶ್ವರ ನಗರದಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ರಾಜಕಾರಣಿಗಳು, ನಿವೃತ್ತರು, ಅಧಿಕಾರಿ ವರ್ಗ, ಸೇರಿದಂತೆ ಇತರರು ವಾಸವಿದ್ದಾರೆ. ಪ್ರಶಾಂತ ವಾತಾವರಣ ಇರುವ ಬಡಾವಣೆ ಮೇಲೆ ಕಳ್ಳರ ಗುಂಪು ವಕ್ರದೃಷ್ಟಿ ಬೀರಿದೆ.

ಈ ಕುರಿತು ಪೊಲೀಸರು, ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು. ಕಳ್ಳರನ್ನು ಬಂಧಿಸಬೇಕು. ರಾತ್ರಿ ಗಸ್ತು ಹೆಚ್ಚಿಸಬೇಕು. ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಪೊಲೀಸ್- ನಾಗರಿಕರ ಸಭೆ

ಬಸವೇಶ್ವರ ನಗರದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳನ್ನು ತಡೆಗಟ್ಟಲು ಭಾನುವಾರ ಸಿ ಬ್ಲಾಕ್‌ನಲ್ಲಿ ಪೊಲೀಸ್- ನಾಗರಿಕರ ಸಭೆ ನಡೆಸಲಾಯಿತು. ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಬೀದಿ ದೀಪ ದುರಸ್ತಿಗೊಳಿಸುವುದು, ಪೊಲೀಸರ ರಾತ್ರಿ ಗಸ್ತು ಹೆಚ್ಚಿಸುವುದು ಸೇರಿದಂತೆ ಹಲವು ಸಲಹೆಗಳನ್ನು ಸ್ಥಳೀಯರು ನೀಡಿದ್ದಾರೆ. ಇದಕ್ಕೆ ಡಿವೈಎಸ್‌ಪಿ ಎಂ.ಎಸ್. ಪಾಟೀಲ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕರಿಗೆ ಸಲಹೆಗಳು

  • ಕಿಟಕಿ ಪಕ್ಕದಲ್ಲಿ ಮೊಬೈಲ್‌ಫೋನ್, ಪರ್ಸ್ ಇಡಬಾರದು
  • ಕಳ್ಳರಿಗೆ ಕಾಣುವಂತೆ ಕೀಲಿ ಹಾಕಬಾರದು
  • ಇಂಟರ್‌ಲಾಕ್ ಬಳಸುವುದು ಉತ್ತಮ
  • ಊರಿಗೆ ಹೋಗುವಾಗ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು
  • ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಬೇಕು
  • ಅನುಕೂಲಸ್ಥರು ಸಿಸಿಟಿವಿ ಅಳವಡಿಸಬೇಕು

ಕಳ್ಳತನ ಹೆಚ್ಚಾಗಿರುವ ಪಾಯಿಂಟ್‌ಗಳನ್ನು ಗುರುತಿಸಿ ರಾತ್ರಿ ಗಸ್ತು ಹೆಚ್ಚಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳೀಯ ಸ್ವಯಂಸೇವಕರ ಗುಂಪುಗಳನ್ನು ರಚಿಸಿ, ಪಾಳಿ ಪ್ರಕಾರ ಬಡಾವಣೆಗೆ ತಡರಾತ್ರಿ ಬಂದು, ಹೋಗುವವರ ಮೇಲೆ ನಿಗಾ ಇಡಲು ಸಿದ್ಧತೆ ನಡೆಸಲಾಗಿದೆ.ಸಂಜೀವಕುಮಾರ ನೀರಲಗಿ, ನಗರಸಭೆ ಸದಸ್ಯ ಎರಡು ಮನೆಗಳವು ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಪತ್ತೆ ಕಾರ್ಯ ನಡೆದಿದೆ. ಸ್ಥಳೀಯರೂ ಕೂಡ ಈ ಬಗ್ಗೆ ಜಾಗರೂಕರಾಗಿರಬೇಕು. ಸಂಶಯ ಬಂದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಬೇಕು.ಎಂ.ಎಸ್. ಪಾಟೀಲ, ಡಿವೈಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net