

ವಿಜಯಪುರ :ವಿಶ್ವಗುರು ಬಸವಣ್ಣ ಅವರು ಜನಿಸಿದ ಬಸವನ ಬಾಗೇವಾಡಿಯಲ್ಲಿ ಬಸವೇಶ್ವರ ಜಾತ್ರೆಯು ಆ.15 ರಿಂದ ಆರಂಭಗೊಂಡು 19ರವರೆಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹಾಗೂ ಸಂಚಾಲಕ ಶಂಕರಗೌಡ ಎಸ್. ಬಿರಾದಾರ್ ಹೇಳಿದರು.
ಆ.13ರಂದು ಜಾತ್ರೆಗೆ ಬರುವ ಭಕ್ತರಿಗೆ ಬಸವನಬಾಗೇವಾಡಿ ಪಟ್ಟಣದ ಹೆಣ್ಣು ಮಕ್ಕಳು ಸಾವಿರಾರು ಜೋಳದ ರೊಟ್ಟಿಗಳನ್ನು ತಯಾರು ಮಾಡಿದ್ದು ಬಸವ ಜನ್ಮಸ್ಥಳ ಬಸವ ಸ್ಮಾರಕದಿಂದ ಬಸವೇಶ್ವರ ದೇವಾಲಯದ ವರೆಗೆ ಬೆಳಿಗ್ಗೆ 10 ಗಂಟೆಗೆ ರೊಟ್ಟಿ ಬುಟ್ಟಿ ಮೆರವಣಿಗೆ ಜರುಗುತ್ತದೆ ಆ.14ರಂದು ಇಂಗಳೇಶ್ವರ ಗ್ರಾಮದಿಂದ ಬಸವನ ಬಾಗೇವಾಡಿ ವರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಬೈಕ್ ರ‌್ಯಾಲಿಯನ್ನು ಏರ್ಪಡಿಸಲಾಗಿದೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.15ರಂದು ಸೋಮವಾರ ಬಸವೇಶ್ವರ ದೇವಾಲಯದಿಂದ ಸಕಲ ಮಂಗಲ ವಾದ್ಯ ವೈಭವಗಳಿಂದ ವಿರಕ್ತಮಠಕ್ಕೆ ತೆರಳಿ ಅಲ್ಲಿಂದ ಶ್ರೀಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ನಂದಿ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲ್ಲಕ್ಕಿಯೊಂದಿಗೆ ಬಸವೇಶ್ವರ ದೇವಸ್ಥಾನದಿಂದ ಪುರಾಣ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಅಲ್ಲಿ ನುಡಿಗಳನ್ನು ಹೇಳಿ, ಸಾಯಂಕಾಲ ಪಲ್ಲಕ್ಕಿ ಉತ್ಸವ ನಾಡಿನ ವಿವಿಧ ಸುಪ್ರಸಿದ್ಧ ಕಲಾತಂಡದ ಮೆರವಣಿಗೆಯೊಂದಿಗೆ ಸಂಜೆ 7ಗೆ ದೇವಸ್ಥಾನಕ್ಕೆ ಬರುವುದು, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಅವಣದಲ್ಲಿ ಆಕರ್ಷಿಕ ಮನಮೋಹಕ ಸಿಡಿಮದ್ದುಗಳನ್ನು ಸುಡಲಾಗುವುದು ಎಂದು ಮಾಹಿತಿ ನೀಡಿದರು.
16ರಂದು ಬೆಳಗ್ಗೆ ಖ್ಯಾತ ಜಾನಪದ ಕಲಾವಿದರಿಂದ ಪ್ರಸಿದ್ಧ ಗಿಗಿ ಪದಗಳು ಚೌಡಕಿ ಡೊಳ್ಳು ಬಜನಾ ಪದಗಳು ಜರಗುವುದು ಮಧ್ಯಾಹ್ನ 3 ಗಂಟೆಗೆ ಜಂಗಿ ಕುಸ್ತಿಗಳು ನಡೆಯುತ್ತವೆ. ರಾತ್ರಿ ಶ್ರೀದೇವಿ ಮಹಾತ್ಮೆ ಎಂಬ ಬಯಲಾಟ ನಡೆಯುತ್ತದೆ. ಆ. 17ರಂದು ಮುಂಜಾನೆ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆ ಜರುಗುತ್ತವೆ. ಮಧ್ಯಾಹ್ನ 3 ಗಂಟೆಯಿಂದ ನಿರ್ಣಾಯಕ ಜಂಗಿ ಕುಸ್ತಿಗಳು ಜರುಗುತ್ತವೆ. ಅಂದು ರಾತ್ರಿ 10.30 ಕ್ಕೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಜರುಗುವುದು, ಆ.18 ರಂದು ಮುಂಜಾನೆ 10 ಗಂಟೆಯಿಂದ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಜರುಗುವುದು, ಅದೇ ದಿನ ರಾತ್ರಿ 7 ಗಂಟೆಗೆ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶಬ್ಬೀರ್ ಡಾಂಗೆ ಅವರಿಂದ ಜಾನಪದ ಸಂಜೆ ಜರಗುತ್ತದೆ.
ಆ.19 ರಂದು ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು. ಜಾತ್ರೆಗೆ ಬರುವ ಪರಸ್ಪರದ ಭಕ್ತರಿಗೆ ದೇವಸ್ಥಾನದಲ್ಲಿ ನಿರಂತರ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ . ಆ.30ರ ವರೆಗೆ ಪ್ರವಚನಕಾರ ಬೈಲೂರಿನ ನಿಷ್ಕಲ್ಮ ಮಂಟಪದ ನಿಜಗುಣ ಪ್ರಭು ತೊಂಟದಾರ್ಯ ಮಹಾಸ್ವಾಮಿಗಳಿಂದ ಅನುಭಾವ ದರ್ಶನ ನಡೆಯಲಿದೆ ಎಂದು ತಿಳಿಸಿದರು.
ನಂದಿ ವಿಗ್ರಹಕ್ಕೆ 100 ಕೆ.ಜಿಯ ಬೆಳ್ಳಿ ಕವಚ
ಕಳೆದ 25 ವರ್ಷಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಬ.ಬಾಗೇವಾಡಿಯಲ್ಲಿರುವ ನಂದಿ ವಿಗ್ರಹಕ್ಕೆ ಬೆಳ್ಳಿ ಕವಚ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಈರಣ್ಣ ಪಟ್ಟಣಶೆಟ್ಟಿ ತಿಳಿಸಿದರು. ಈಗಾಗಲೇ ಭಕ್ತರಿಂದ 15 ಕೆ.ಜಿ ಬೆಳ್ಳಿ ಸಂಗ್ರಹಿಸಲಾಗಿದೆ. ಒಟ್ಟು 100 ಕೆಜಿ ಬೆಳ್ಳಿಯಲ್ಲಿ ನಂದಿ ವಿಗ್ರಹಕ್ಕೆ ಮುಂದಿನ ವರ್ಷ ಶ್ರಾವಣ ಮಾಸದಲ್ಲಿ ಬೆಳ್ಳಿ ಕವಚ ಪ್ರತಿಷ್ಠಾಪಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಸಮಿತಿಯ ಉಪಾಧ್ಯಕ್ಷ ಪರಶುರಾಮ್ ಜಮಖಂಡಿ ಸಂಗಮೇಶ ವಾಡೆದ, ಖಜಾಂಚಿ ರವಿ ಚಿಕ್ಕೊಂಡ ಮುಖಂಡರಾದ ಬಸವರಾಜ ಕೋಟಿ, ನಾಗರಾಜ ಗುಂದಗಿ ಉಪಸ್ಥಿತರಿದ್ದರು.