

ಹುಬ್ಬಳ್ಳಿ: ಗ್ರಾಮೀಣರು ಸೇರಿ ಎಲ್ಲರಿಗೂ ಉತ್ತಮ ಶಿಕ್ಷಣ ಒದಗಿಸಬೇಕೆಂಬ ಹಂಬಲದೊಂದಿಗೆ 2004ರಲ್ಲಿ ಆರಂಭವಾದ ಧಾರವಾಡ ತಾಲೂಕಿನ ಸತ್ತೂರಿನ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಹಾಗೂ ಡೆವಲಪಮೆಂಟ್ ಟ್ರಸ್ಟ್ ಇದೀಗ ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಶಿಕ್ಷಣ ಕಲಿಸಬೇಕೆಂಬ ಉದ್ದೇಶದಿಂದ ಬಿಸಿಎ ಕೋರ್ಸ್ ಪ್ರಾರಂಭಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಂಪ್ಯೂಟರ್ ಶಿಕ್ಷಣ ಆಧಾರಿತ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅನೇಕ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ದಿಸೆಯಲ್ಲಿ ಕಡಿಮೆ ಶುಲ್ಕದಲ್ಲಿ ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್ ಕಲಿಯುವ ಅವಕಾಶ ನೀಡಲಾಗುತ್ತಿದೆ ಎಂದರು.
ಈಗಾಗಲೇ ಹಲವು ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್ ಗಳನ್ನು ಟ್ರಸ್ಟ್ ನಡೆಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಿಕ್ಷಣದ ಜತೆಗೆ ಟ್ರಸ್ಟ್ ಹಲವಾರು ಸಾಮಾಜಿಕ, ಆರೋಗ್ಯ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಈ ವರೆಗೆ 1200ಕ್ಕೂ ಹೆಚ್ಚು ಉಪನ್ಯಾಸ ಮಾಲಿಕೆ, ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿದೆ. ವಿದ್ಯಾರ್ಥಿಗಳನ್ನು ವಿಮೆ ಯೋಜನೆ ಅಡಿ ತರಲಾಗುತ್ತಿದೆ. ಇದರಿಂದ ಯಾರಾದರೂ ಅಪಾಯಕ್ಕೆ ಸಿಲುಕಿದರೆ ಅವರ ಕುಟುಂಬದವರಿಗೆ ಪರಿಹಾರ ಹಣ ಲಭ್ಯವಾಗಲಿದೆ ಎಂದರು.
ಟ್ರಸ್ಟಿ ನಾಗರಾಜ ಕೊಟಗಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಕಂಪ್ಯೂಟರ್ ಕೋರ್ಸ್ ಗಳಿಗೆ ಬಹಳಷ್ಟು ಬೇಡಿಕೆ ಇದೆ. ವಿಶೇಷವಾಗಿ ಸೈಬರ್ ಕ್ರೈಂ ತಡೆಗಟ್ಟಲು ಇದು ಅವಶ್ಯಕ. ಹಾಗಾಗಿ ಬಿಸಿಎ ಕೋರ್ಸ್ ಗೆ ಪರಿಣಿತ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ ಎಂದರು.
ಬಸವೇಶ್ವರ ರೂರಲ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ ಮಾತನಾಡಿ, ಸತ್ತೂರಿನ ಉತ್ತಮ ಪರಿಸರದಲ್ಲಿ ಕಾಲೇಜು ಸ್ಥಾಪನೆಯಾಗಿದ್ದು, ಕಲಿಕೆಗೆ ಒಳ್ಳೆಯ ವಾತಾವರಣ ಇದೆ. ಕಾಲಕಾಲಕ್ಕೆ ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆಯನ್ನೂ ನೀಡಲಾಗುತ್ತಿದೆ ಎಂದರು.
ಪ್ರೊ. ಪ್ರವಿಣ, ಪ್ರೊ. ಉಮೇಶ ಜಾವೂರ ಗೋಷ್ಠಿಯಲ್ಲಿದ್ದರು.