

ರಾಯಚೂರು ಚುಕ್ಕಿ ಪ್ರತಿಷ್ಠಾನ ಸಿರವಾರ ವತಿಯಿಂದ ಲಿಂ.ಉಮಾಪತಿ ಚುಕ್ಕಿಯವರ 49ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಜೂ.11 ರಂದು ಸಂಜೆ 7 ಗಂಟೆಗೆ ಜಿಲ್ಲೆಯ ಸಿರವಾರ ಪಟ್ಟಣದ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಕಲ್ಯಾಣ ಭವನದಲ್ಲಿ ಬಸವತತ್ವ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಲಿದೆಂದು ಪ್ರತಿಷ್ಠಾನದ ಸಂಸ್ಥಾಪಕ ಚುಕ್ಕಿ ಸೂಗಪ್ಪ ಸಾಹುಕಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10 ಗಂಟೆಯಿಂದ ಬಸವಾದಿ ಶರಣರ ಪೂಜೆ ಹಾಗೂ ಮಧ್ಯಾಹ್ನ 1 ಗಂಟೆಯಿಂದ ಶಿವಗಣಾರಾಧನೆ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಯಿಂದ ಬಸವ ಚಿಂತನಗೋಷ್ಠಿ ನಡೆಯಲಿದ್ದು, ಗೋಷ್ಠಿಯ ಸಾನಿಧ್ಯವನ್ನು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್ ನೆರವೇರಿಸಲಿದ್ದಾರೆ. ಅನುಭಾವವನ್ನು ಬೆಳಗಾವಿಯ ಗುರುಬಸವ ಮಠದ ಬಸವಗೀತಾ ವಹಿಸಿಕೊಳ್ಳಲಿದ್ದು, ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ದೂರದರ್ಶನದ ಹಾಸ್ಯಕಲಾವಿದ ನವಲಿಂಗ ಪಾಟೀಲ್ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದರು.
2024-25ನೇ ಸಾಲಿನ ಕೃತಿಗಳ ಪ್ರಶಸ್ತಿಯನ್ನು ಅರವತ್ತಮೂರು ಪುರಾತನ ಪಟಗಳು ಕೃತಿಯ ರಚನಾಕಾರ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಚಿತ್ ಜ್ಯೋತಿ ಕೃತಿಯ ಡಾ.ಸರ್ವಮಂಗಳ ಸಕ್ರಿ ಹಾಗೂ ಸಂಘರ್ಷದ ಹಾದಿಯಲ್ಲಿ ಕೃತಿಯ ಬಾಬು ಭಂಡಾರಿಗಲ್ ಅವರಿಗೆ ಪ್ರಧಾನ ಮಾಡಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಚಂದ್ರಶೇಖರ, ವಿಶ್ವಾಸ್ ಚುಕ್ಕಿ, ಪರಮೇಶ್ವರ ಸಾಲೀಮಠ, ಮಲ್ಲಿಕಾರ್ಜುನ ಹಳ್ಳೂರು ಇದ್ದರು.