

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಿ ಶಾಂತಿ, ನೆಮ್ಮದಿ ಇಲ್ಲ. ಮೌಲ್ಯಧಾರಿತ ರಾಜಕಾರಣ ಎಂಬುದು ತನ್ನ ಅರ್ಥ ಕಳೆದು ಕೊಂಡಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದ ಬಸವ ಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ಯಾಲಕ್ಕಿಶೆಟ್ಟರ್ ಕಾಲನಿಯ ಸೌಹಾರ್ದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವಶಾಂತಿ ಪ್ರಶಸ್ತಿ-2023 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತವಕ, ತಲ್ಲಣಗಳು ಹೆಚ್ಚಾಗಿ ಆಸ್ತಿರತೆಯಲ್ಲಿರುವ ರಾಜಕೀಯದಿಂದ ಕೆಲಕಾಲ ದೂರವಿದ್ದು, ಇಂತಹ ನೈತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮನಃಶಾಂತಿ, ನೆಮ್ಮದಿ ಸಿಗಲಿದೆ ಎಂದರು.
ರಂಜಾನ್ ದರ್ಗಾ ಮಾತನಾಡಿ, ಶರಣ ಸಾಹಿತ್ಯ, ಬಸವತತ್ವ ಕುರಿತು ಇನ್ನೂ ಬರಹ ಕಟ್ಟಬೇಕಿದೆ. ಮತ್ತು ಅದರಲ್ಲಿ ಒಳಗೊಳ್ಳಬೇಕಿದೆ ಎಂದರು.
ಡಾ. ಮೃತ್ಯುಂಜಯ ಶೆಟ್ಟರ್ ಮಾತನಾಡಿದರು. ರಾಮದುರ್ಗದ ಡಾ. ಶಶಿಕಾಂತ ಪಟ್ಟಣ ಅವರಿಗೆ ಬಸವ ಶಾಂತಿ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು.
ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಹೊರಟ್ಟಿ, ಪ್ರೇಮಕ್ಕ ಹೊರಟ್ಟಿ, ಮಂಜುನಾಥ ಮೊಹರೆ, ಇತರರು ಇದ್ದರು. ಕಲಾವಿದರು ವಚನ ಸಂಗೀತ, ದಾಸರ ಪದ, ಅಭಂಗವಾಣಿ, ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಡಾ. ವೀಣಾ ಹೂಗಾರ ಸ್ವಾಗತಿಸಿದರು. ಸುಧಾ ಕಬ್ಬೂರ ನಿರೂಪಿಸಿದರು. ಡಾ. ಅನುಷಾ ಸರದೇಸಾಯಿ ವಂದಿಸಿದರು.