

ಮಾನ್ವಿ: ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ 5.85 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಾ.ಶಂಕರಗೌಡ ಪಾಟೀಲ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘದ 22ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಹಕಾರಿ 521.76 ಕೋಟಿ ರೂ. ವ್ಯವಹಾರ ಹೊಂದಿದೆ. ಈ ವರ್ಷದ ಲಾಭಾಂಶದಲ್ಲಿ ಶೇ. 22 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.
ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಮಾತನಾಡಿ,ಸಮಾಜದಲ್ಲಿ ನೆಮ್ಮದಿ ಜೀವನ ಸಾಗಿಸುವಂತಾಗುವಲ್ಲಿ ಕುಟುಂಬದ ಎಲ್ಲ ಸದಸ್ಯರು ಒಗ್ಗೂಡಬೇಕು. ಕನಿಷ್ಠ ಕುಟುಂಬದ ಎಲ್ಲ ಸದಸ್ಯರು ಕೂಡಿ ಊಟ ಮಾಡುವ ಮಟ್ಟಿಗಾದರೂ ನಿತ್ಯ ಬೆರೆತಲ್ಲಿ ಕೌಟುಂಬಿಕ ನೋವು, ನಲಿವುಗಳ ಅರಿವಾಗಿ, ಸ್ಪಂದಿಸುವ ಕೆಲಸವಾಗುತ್ತದೆ ಎಂದರು.
ಪತ್ರಿಕೆಗಳ ಓದು ಹೊಸತನ, ವೈಚಾರಿಕ ಪ್ರಜ್ಞೆ ಹಾಗೂ ವಿನೂತನ ಕಲಿಕೆಗೆ ಸಹಕಾರಿ ಆಗುತ್ತದೆ. ಕೃಷಿ, ವಾಣಿಜ್ಯ, ಉದ್ಯಮ, ತಾಂತ್ರಿಕತೆ ಹೀಗೆ ಹಲವು ವೈವಿಧ್ಯಮಯ ಆವಿಷ್ಕಾರಗಳ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು, ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಟಿ., ನಿರ್ದೇಶಕ ಮಲ್ಲನಗೌಡ ನಕ್ಕುಂದಿ, ಸಹಕಾರಿ ಸಿಇಒ ವೀರೇಶ ಎನ್. ಹೊಸೂರು, ವ್ಯವಸ್ಥಾಪಕ ಚಂದ್ರಮೌಳೇಶ್ವರ ಇತರರಿದ್ದರು.