

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 20 ಕ್ರಸ್ಟ್ ಗೇಟ್‌ಗಳ ಮೂಲಕ 95 ಸಾವಿರ ಕ್ಯೂಸೆಕ್ ನೀರು ಶುಕ್ರವಾರ ಹರಿಬಿಡಲಾಯಿತು.
ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಪ್ರಯುಕ್ತ ಆಲಮಟ್ಟಿ ಆಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 492.252 ಮೀ. (33.31 ಟಿಎಂಸಿ) ಇದ್ದು, ಶುಕ್ರವಾರದ ನೀರಿನ ಮಟ್ಟ 492.25 ಮೀ. (32.70 ಟಿಎಂಸಿ) ಇದೆ.
ಜಲಾಶಯದಿಂದ 1.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟರೆ ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಲಿದೆ. ಈಗಾಗಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಟ್ಟಾಗ ಎರಡು ಬಾರಿ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ನಡುಗಡ್ಡೆ ಹಳ್ಳಿಗಳ ಸಂಪರ್ಕ ಕಡಿತಗೊಂಡಿತ್ತು. ಇದೀಗ ಹೆಚ್ಚುವರಿ ನೀರು ಹರಿಬಿಟ್ಟರೆ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಾರ್ವಜನಿಕರು ತಾಲೂಕು ಕೇಂದ್ರ ತಲುಪಲು ಜಲದುರ್ಗ ಮಾರ್ಗವಾಗಿ 45 ಕಿಮೀ. ಸುತ್ತುವರಿದು ಬರಬೇಕಾದ ಅನಿವಾರ್ಯತೆ ಎದುರಾಗಲಿದೆ.