

ದೇವದುರ್ಗ: ಬಸವಸಾಗರದಿಂದ ಗುರುವಾರ 4.06 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾನದಿಗೆ ಹರಿಬಿಟ್ಟಿದ್ದರಿಂದ ನದಿ ತೀರದ ಗ್ರಾಮಸ್ಥರು, ರೈತರಿಗೆ ನೆರೆ ಹಾವಳಿ ಆತಂಕ ಮೂಡಿದ್ದು, ವಿವಿಧ ದೇವಸ್ಥಾನಗಳಿಗೆ ಜಲದಿಗ್ಬಂಧನ ಹಾಕಿದಂತಾಗಿದೆ.
ಜಲಾಶಯಕ್ಕೆ 4.10 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ 4.06 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸದ್ಯ ಡ್ಯಾಮ್ನಲ್ಲಿ 22ಟಿಎಂಸಿ ಅಡಿ ನೀರಿದೆ. ತಾಲೂಕಿನಲ್ಲಿ 57 ಕಿಮೀ ಉದ್ದ ನದಿ ಹರಿಯುತ್ತಿದ್ದು, 28ಗ್ರಾಮಗಳಲ್ಲಿ ನೆರೆಹಾವಳಿ ಭೀತಿ ಶುರುವಾಗಿದೆ. ಲಿಂಗದಹಳ್ಳಿ, ಬಾಗೂರು, ಗೋಪಾಲಪುರ, ಹೂವಿನಹೆಡಗಿ, ಜೋಳದಹೆಡಗಿ, ದೊಂಡಂಬಳಿ, ಕರಕಿಹಳ್ಳಿ, ಕೋಣಚಪ್ಪಳಿ, ಕೊಪ್ಪರ, ಮ್ಯಾದರಗೊಳ, ಯಾಟಗಲ್, ಗೂಗಲ್ ಸೇರಿ ವಿವಿಧ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದೆ. ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ, ತೊಗರಿ, ಭತ್ತದ ಬೆಳೆಗಳು ನೀರಿಗೆ ಕೊಚ್ಚಿ ಹೋಗಿದೆ.
ಒಂದು ವಾರದಿಂದ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ದೇವದುರ್ಗ ಶಹಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಿಂಥಣಿ ಮೌನೇಶ್ವರ ದೇವಸ್ಥಾನ ಸಮೀಪ ನೀರು ಬಂದಿದ್ದು, ವೀರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಸ್ಥಾನ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದೆ. ಶ್ರೀ ಕನಕಗುರಪೀಠ ರಸ್ತೆ ಸಮೀಪ ನೀರು ಬಂದಿದ್ದು, ಹೂವಿನಹೆಡಗಿ ಗ್ರಾಮದ ಶ್ರೀ ಗಡ್ಡಗೂಳಿ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ಬಸವಣ್ಣ ದೇವಸ್ಥಾನಕ್ಕೆ ಜಲದಿಗ್ಬಂಧನ ನಿರ್ಮಾಣವಾಗಿದೆ. ಗೂಗಲ್ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ.