

ವಿಜಯಪುರ: ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಸಂವಿಧಾನ ರೂಪಿಸಿದ ಮಹಾನ್ ಚೇತನರ ಪ್ರತಿಭೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಾವು ಸಂವಿಧಾನ ದಿನ ಆಚರಿಸುತ್ತೇವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎ. ಪಾಟೀಲ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆನ್‌ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಜನರಿಗೆ ತಿಳಿಸಲು ಈ ಸಂವಿಧಾನ ದಿನ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಕಾನೂನಿನ ನಿಯಮಗಳನ್ನು ಕಾಪಾಡುವುದು ಸಂವಿಧಾನದ ಮೂಲ ಉದ್ದೇಶವಾಗಿದ್ದು, ಸಂವಿಧಾನವು ಒಂದು ದೊಡ್ಡ ಕೊಡೆಯಂತಿದ್ದು ಅದರಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಆಶ್ರಯ ಪಡೆಯುತ್ತಿದ್ದಾರೆ. ದೇಶದ ಎಲ್ಲ ನಾಗರಿಕರ ರಕ್ಷಣೆಗಾಗಿ ಸಂವಿಧಾನವನ್ನು ರೂಪಿಸಿದ್ದು, ಇದು ಪ್ರತಿ ವ್ಯಕ್ತಿಯ ಸ್ವಾತಂತ್ರೃವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಮಹಿಳಾ ವಿವಿಯ ಪ್ರಭಾರ ಕುಲಪತಿ ಪ್ರೊ.ಓಂಕಾರಗೌಡ ಕಾಕಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂವಿಧಾನ ಬೃಹತ್ ಮತ್ತು ಶ್ರೇಷ್ಠ ಸಂವಿಧಾನ ಎಂದು ಖ್ಯಾತಿ ಪಡೆದಿದೆ. ದೇಶದ ಎಲ್ಲ ಜನರು ಸಮಾನ ಅವಕಾಶವನ್ನು ಪಡೆದುಕೊಂಡು, ಸುಂದರವಾದ ವಾತಾವರಣವನ್ನು ಕಲ್ಪಿಸಲು ಸಂವಿಧಾನ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ನಮ್ಮ ದೇಶದ ಪ್ರಜೆಗಳಿಗೆ ಕಾನೂನಿನ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನ ಉಪಯುಕ್ತವಾಗಿದೆ ಎಂದರು.
ಎನ್.ಎಸ್.ಎಸ್. ಕೋಶದ ಸಂಯೋಜಕ ಪ್ರೊ. ನಾಮದೇವ್ ಗೌಡ, ಶಿಕ್ಷಣ ನಿಕಾಯದ ಡೀನ್ ಪ್ರೊ.ಡಿ.ಎಂ. ಜ್ಯೋತಿ, ಎನ್.ಎಸ್.ಎಸ್. ಕೋಶದ ಕಾರ್ಯಕ್ರಮ ಅಧಿಕಾರಿ ಜೆನ್ನಿರ್ ಸೌಲಮ್, ಡಾ. ಕಲಾವತಿ ಕಾಂಬ್ಳೆ ಇತರರಿದ್ದರು.