ದೇಶಕ್ಕೆ ಅನ್ನ ನೀಡುವ ರೈತರಿಗೆ ಸಂಕಷ್ಟ

Basavapatnam, Yantra Nati,
Published on

ಎಸ್‌ಕೆಡಿಆರ್‌ಪಿಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಹೇಳಿಕೆ l ಸಂಗಾಹಳ್ಳಿಯಲ್ಲಿ ಯಂತ್ರ ನಾಟಿಗೆ ಚಾಲನೆ

ಬಸವಾಪಟ್ಟಣ: ಪ್ರಸ್ತುತ ದಿನಮಾನಗಳಲ್ಲಿ ಅನೇಕ ಕಾರಣಗಳಿಂದ ದೇಶಕ್ಕೆ ಅನ್ನ ನೀಡುತ್ತಿರುವ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಎಸ್‌ಕೆಡಿಆರ್‌ಪಿ ದಾವಣಗೆರೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.

ಸಮೀಪದ ಸಂಗಾಹಳ್ಳಿಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಯಂತ್ರಶ್ರೀ ಯೋಜನೆಯಡಿ ಯಂತ್ರ ನಾಟಿಗೆ ಚಾಲನೆ ನೀಡಿ, ಮಾತನಾಡಿದರು.

ಸಾಂಪ್ರದಾಯಕ ಕೃಷಿ ಪದ್ಧತಿಯಿಂದ ವೆಚ್ಚ ಹೆಚ್ಚಾಗುತ್ತಿದ್ದು, ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸುವಂತೆ ಹೇಳಿದರು.

ರೈತರು ವಾಣಿಜ್ಯ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ಮನುಷ್ಯನ ಜೀವನಕ್ಕೆ ಬೇಕಾಗಿರುವ ಅನ್ನವೇ ಹೊರತು ಅಡಕೆಯಲ್ಲ. ಹಾಗಂತ ಭತ್ತ ಬೆಳೆ ನಿರ್ಲಕ್ಷಿಸುವಂತಿಲ್ಲ. ಭತ್ತವೂ ರೈತರಿಗೆ ಲಾಭ ನೀಡುವಂಥ ಪ್ರಮುಖ ಬೆಳೆ. ಭತ್ತದತ್ತ ಆಕರ್ಷಿಸಲು ವೀರೇಂದ್ರ ಹೆಗ್ಗಡೆಯವರು ಯಂತ್ರಶ್ರೀ ಯೋಜನೆ ಅನುಷ್ಠಾನ ಮಾಡಿದ್ದಾರೆ. ಖರ್ಚು ಕಡಿಮೆ, ಇಳುವರಿ ಹೆಚ್ಚಾಗಿ ಲಾಭ ಹೆಚ್ಚಾಗಲಿದೆ ಎಂದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಲತಾ ಮಾತನಾಡಿ, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಸಲಹೆ, ಸೂಚನೆಯಂತೆ ಕೃಷಿ ಮಾಡಿದರೆ ಅವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ವಲಯ ಕೃಷಿ ಮೇಲ್ವಿಚಾರಕ ಶಂಭುಲಿಂಗಯ್ಯ ಮಾತನಾಡಿ, ಈ ಬಾರಿ ಬಸವಾಪಟ್ಟಣ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 50 ಎಕರೆ ಪ್ರದೇಶದಲ್ಲಿ ಯಂತ್ರ ನಾಟಿ ಕೃಷಿ ಮಾಡುತ್ತಿದ್ದು, ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಯಂತ್ರ ಕೃಷಿ ನಾಟಿ ಹೆಚ್ಚಾಗಲಿದೆ ಎಂದರು.

ಯೋಜನಾಧಿಕಾರಿ ನವೀನ್, ನಾಟಿ ಯಂತ್ರ ಬ್ಯಾಂಕ್ ಮೇಲ್ವಿಚಾರಕ ರಾಜೇಂದ್ರ, ಸಂತೆಬೆನ್ನೂರು ಕೃಷಿ ಯಂತ್ರಧಾರೆ ಪ್ರಬಂಧಕ ದಿನೇಶ್, ವಲಯ ಮೇಲ್ವಿಚಾರಕಿ ಚಂದ್ರಪ್ರಭಾ, ಸೇವಾ ಪ್ರತಿನಿಧಿ ಸಾವಿತ್ರಮ್ಮ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net