ಬಸವಣ್ಣನವರ ವಚನಗಳು ಇಂಗ್ಲಿಷ್‌ಗೆ ತರ್ಜುಮೆ, ಡಿವೈಎಸ್‌ಪಿ ಬಸವರಾಜ ಯಲಿಗಾರಗೆ ಅಭಿನಂದನೆ, ನನ್ನೊಳಗಿನ ನಾನು ನೀನೆ ಕೃತಿ ಲೋಕಾರ್ಪಣೆ

MAHANTESH BIRADAR PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಸಚಿವ ಎಂ.ಬಿ. ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಸುದ್ದಿಗೋಷ್ಠಿ ನಡೆಸಿದರು. ಶರಣು ಸಬರದ, ಎಂ.ಆರ್. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಗೊಳಿಸಿರುವ ವಿಜಯಪುರ ನಗರ ಉಪ ವಿಭಾಗ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರಿಗೆ ಜಿಲ್ಲಾ ಯುವ ಪರಿಷತ್‌ನಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ತಿಳಿಸಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜೂ. 29ರಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಸಮಾರಂಭವನ್ನು ಮೈಸೂರಿನ ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರ ಉದ್ಘಾಟಿಸುವರು. ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಸಚಿವ ಡಾ.ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಡಾ. ಸಿದ್ದರಾಮ ಬೆಲ್ದಾಳ ಶರಣರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಸಿಇಒ ರಿಷಿ ಆನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಸಾಹಿತಿ ಡಾ.ರಾಜಶೇಖರ ಮಠಪತಿ, ಲೇಖಕಿ ಸಿ.ಸಿ.. ಹೇಮಲತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅನುಭಾವಿ ಬಿ.ಆರ್. ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡುವರು. ಉದ್ಯಮಿ ಪಿ.ರಮಣ, ಅಶೋಕ ಹಂಚಲಿ, ನ್ಯಾಯವಾದಿ ಮಹ್ಮದ್‌ಗೌಸ್ ಹವಾಲ್ದಾರ್ ಉಪಸ್ಥಿತರಿರುವರು. ಸ್ವಯಂಭೋ ಆರ್ಟ್ ಫೌಂಡೇಶನ್ ಕಲಾವಿದೆ ದೀಕ್ಷಾ ಹಾಗೂ ದಿವ್ಯಾ ಭಿಸೆ ಅವರಿಂದ ಭರತನಾಟ್ಯ, ಸಾಕ್ಷಿ ಹಿರೇಮಠ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಾನಿಯಾ ಜಿದ್ದಿ ನಿರೂಪಿಸುವರೆಂದು ತಿಳಿಸಿದರು.

ಕೃತಿಗೆ ವ್ಯಾಪಕ ಪ್ರಶಂಸೆ

ನನ್ನೊಳಗಿನ ನಾನು ನೀನೇ (ಮೈ ಮಿ ಇಸ್ ದಿ) ಎಂಬ ಅನುವಾದ ಕೃತಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬಸವಣ್ಣನವರ 955 ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಲಾಗಿದೆ. ದೇಶ-ವಿದೇಶಗಳಲ್ಲಿಯೂ ಈ ಕೃತಿ ಜನಪ್ರಿಯತೆ ಪಡೆದಿದೆ. ವೃತ್ತಿಯಿಂದ ಪೊಲೀಸ್ ಅಧಿಕಾರಿಯಾದರೂ ಬಸವರಾಜ ಯಲಿಗಾರ ಅವರು ಪ್ರವೃತ್ತಿಯಾಗಿ ವಚನಗಳನ್ನು ಭಾಷಾಂತರಿಸುವ ಕೆಲಸ ಮಾಡಿರುವುದು ಶ್ಲಾಘನೀಯ. ಬಸವಣ್ಣನವರ ವಿಚಾರಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಳ್ಳುವ ಅವಶ್ಯಕತೆ ಇದೆ ಎಂದರು.

ಕನ್ನಡದ ಬಗ್ಗೆ ಎಷ್ಟೇ ಕಾಳಜಿ ವ್ಯಕ್ತಪಡಿಸಿದರೂ ಇಂದಿನ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಾಗಿ ವಾಲುತ್ತಿದ್ದಾರೆ. ಹೀಗಾಗಿ ಕನ್ನಡದ ವಚನಗಳು ಇಂಗ್ಲಿಷ್‌ಗೂ ತರ್ಜುಮೆಗೊಳ್ಳುವ ಅವಶ್ಯಕತೆ ಇದೆ ಎಂದರು.

ಮುಖಂಡರಾದ ಎಂ.ಆರ್. ಪಾಟೀಲ ಬಳ್ಳೊಳ್ಳಿ ಮಾತನಾಡಿ, ಬಸವಣ್ಣನವರ ವಚನಗಳನ್ನು ಜಗತ್ತಿಗೆ ಪರಿಚಯಿಸಲು ಈ ಕೃತಿ ತುಂಬ ಸಹಕಾರಿಯಾಗಿದೆ ಎಂದರು.

ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ ಮತನಾಡಿ, ಬಸವಣ್ಣನವರ ಆಶಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಸಣ್ಣ ಮಗುವಿಗೂ ಅರ್ಥವಾಗುವಂತೆ ವಚನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿರುವುದು ಬಸವರಾಜ ಯಲಿಗಾರ ಅವರ ಹಿರಿಮೆ ಎಂದರು.

ಸಕೀಲ ಸುತಾರ್, ಸೈಯದ್‌ಖಾದ್ರಿ ಇನಾಮದಾರ, ಕುಷ್‌ರಾಜ್ ಪರೆಣ್ಣವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net