

ಕೂಡಲಸಂಗಮ: ನುಡಿದಂತೆ ನಡೆದ ಬಸವಣ್ಣನ ವಿಚಾರಗಳು ಇಂದಿನ ಯುವ ಜನಾಂಗಕ್ಕೆ ಅಗತ್ಯವಾಗಿದ್ದು ಅವುಗಳನ್ನು ಬಿತ್ತರಿಸುವ ಕಾರ್ಯವನ್ನು ಸರ್ಕಾರ, ಮಠಾಧೀಶರು ಮಾಡಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಬಸವ ಧರ್ಮ ಪೀಠದ ಧ್ಯಾನ ಮಂಟಪದಲ್ಲಿ ಬುಧವಾರ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ತೊಟ್ಟಿಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಬಸವ ಜಯಂತಿಯ ನಿಮಿತ್ತ ಸರ್ಕಾರ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವೈಭವ ಪ್ರತಿ ವರ್ಷ ಕೂಡಲಸಂಗಮದಲ್ಲಿ ನಡೆಯಬೇಕು ಎಂದರು.
ಕೇಂದ್ರ ಸರ್ಕಾರ ಬಸವ ಜಯಂತಿಯನ್ನು ಕಾಯಕ ದಿನವನ್ನಾಗಿ ಘೋಷಿಸಬೇಕು. ಬಸವಣ್ಣನ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರತಿ ತಿಂಗಳು ಒಬ್ಬ ಶರಣರ ಚಿಂತನಾ ಗೋಷ್ಠಿ ಹಮ್ಮಿಕೊಳ್ಳುವ ಮೂಲಕ ವಚನ ಸಾಹಿತ್ಯ ಭಿತ್ತರಿಸಬೇಕು. ವಿಶ್ವವಿದ್ಯಾಲಯ ಆರಂಭಕ್ಕೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳು ಕೂಡಲಸಂಗಮದಲ್ಲಿ ಇರುವುದರಿಂದ ಸರ್ಕಾರ ವಚನ ವಿಶ್ವವಿದ್ಯಾಲಯವನ್ನು ಕೂಡಲಸಂಗಮದಲ್ಲಿಯೇ ಆರಂಭಿಸಬೇಕು ಎಂದರು.
ಭದ್ರಾವತಿ ಎಚ್.ಎಸ್.ಬಸವರಾಜಪ್ಪ, ಜಮಖಂಡಿಯ ಮಡಿವಾಳಪ್ಪ ಹೂಟಗಿ, ಶಂಕ್ರಪ್ಪ ಸಾವಳಗಿ, ಮಾತೆ ತುಂಗಮ್ಮ, ಸಂಗಮ್ಮ, ಲೋಹಿತಾದೇವಿ ಮತ್ತಿತರರಿದ್ದರು. ಬಸವಣ್ಣನ ಐಕ್ಯಸ್ಥಳದಲ್ಲಿ ಮಹಾದೇಶ್ವರ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿ, ವಚನ ಪಠಣ ಮಾಡಿದರು.