ಬಸವಣ್ಣನವರ ನಿರ್ಣಯ ಸರ್ವಕಾಲಕ್ಕೂ ಆದರ್ಶ

SRP_19-02jpj
ಶ್ರೀರಂಗಪಟ್ಟಣದ ಶ್ರೀ ಜೋತಿರ್ಮಹೇಶ್ವರ ದೇವಾಲಯದ ಆವರಣದಲ್ಲಿ ಬಸವರಥ ಮೆರವಣಿಗೆಗೆ ಗುರುಶಾಂತಪ್ಪ ಸ್ವಾಮೀಜಿ ಚಾಲನೆ ನೀಡಿದರು. ಜಗದೀಶ್, ಪ್ರದೀಪ್, ಬಿದರಹಳ್ಳಿಹುಂಡಿ ನಾಗರಾಜು, ಶಿವಕುಮಾರ್, ನಂದೀಶ್, ಎಸ್.ಕುಮಾರ್, ಶ್ರೀಕಂಠು, ಪರಶಿವು, ಮಂಜುನಾಥ್, ಸೌಮ್ಯಾ ಇದ್ದರು.
Published on

ಶ್ರೀರಂಗಪಟ್ಟಣ: ಶರಣಶ್ರೇಷ್ಠ ಬಸವೇಶ್ವರರು ಸಮಾಜದಲ್ಲಿ ಸಮಾನತೆಗಾಗಿ ಕೈಗೊಂಡ ನೀತಿ ಹಾಗೂ ನಿರ್ಣಯಗಳು ಸರ್ವಕಾಲಕ್ಕೂ ಆದರ್ಶ ಎಂದು ಮೈಸೂರಿನ ಕುದೇರು ಮಠದ ಗುರುಶಾಂತ ಸ್ವಾಮೀಜಿ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಲಿಂಗಾಯತ ಮಹಾಸಭಾ ಹಾಗೂ ಜಗಜ್ಯೋತಿ ಬಸವೇಶ್ವರ ಸಂಘದ ಸಹಯೋಗದಲ್ಲಿ ಪಟ್ಟಣದ ಶ್ರೀ ಜೋತಿರ್ಮಹೇಶ್ವರ ದೇವಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ಬಸವ ರಥದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

12ನೇ ಶತಮಾನದಲ್ಲೇ ಅಸಮಾನತೆ, ಶೋಷಣೆ ಹಾಗೂ ಜಾತೀಯತೆ ವಿರುದ್ಧ ದನಿ ಎತ್ತಿ ವಚನಗಳ ಮೂಲಕ ನ್ಯೂನತೆಗಳನ್ನು ತಿದ್ದಿ ಲೋಕ ಕಲ್ಯಾಣಕ್ಕೆ ಹೋರಾಡಿದ ಮಹಾನ್ ಸಂತ, ಶರಣಶ್ರೇಷ್ಠ ಬಸವೇಶ್ವರರು. ಯಾವುದೇ ಜಾತಿ, ಧರ್ಮ, ವರ್ಗಗಳಿಗೆ ಮಣೆ ಹಾಕದೆ ಬಸವಾದಿ ತತ್ವಗಳ ಮೂಲಕ ಕಾಯಕದಲ್ಲಿ ಕೈಲಾಸ ತೋರಿಸಿಕೊಟ್ಟ ಮಹಾ ಬೆಳಕು. ಈ ಕಾರಣದಿಂದಲೇ ಅವರನ್ನು ಜಗಜ್ಯೋತಿ ಎನ್ನಲಾಯಿತು. ಬಸವೇಶ್ವರರನ್ನು ಯಾರೂ ಸಹ ಯಾವುದೇ ಸಮುದಾಯಕ್ಕೆ ಮೀಸಲುಗೊಳಿಸದೆ ಅವರ ಆದರ್ಶ ಮತ್ತು ನೀತಿಗಳನ್ನು ಅನುಸರಿಸಬೇಕು ಎಂದರು.

ವಿಶೇಷ ಹೂವುಗಳಿಂದ ಸರ್ವಾಲಾಂಕೃತಗೊಂಡ ಬಸವ ರಥವನ್ನು ಶ್ರೀರಂಗಪಟ್ಟಣದ ಮುಖ್ಯರಸ್ತೆಯಲ್ಲಿ ಸಮುದಾಯ ಜನರು ಎಳೆದೊಯ್ದರು. ಈ ವೇಳೆ ಪಿಲ್ಲಹಳ್ಳಿ ಗ್ರಾಮದ ಬಸವೇಶ್ವರ ಕಲಾ ತಂಡದ ಕಲಾವಿದರು ನಂದಿಧ್ವಜ, ವೀರಗಾಸೆ ಕುಣಿತ, ವೀರಭದ್ರ ಕುಣಿತಗಳನ್ನು ಮಂಗಳವಾದ್ಯಗಳೊಂದಿಗೆ ನೆರವೇರಿಸಿದರು. ಬಳಿಕ ದೇವಾಲಯ ಆವರಣದಲ್ಲಿ ಭಕ್ತರು ಮತ್ತು ಪುರಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಿದರಹಳ್ಳಿಹುಂಡಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಂದೀಶ್, ಮುಖಂಡರಾದ ಎಸ್.ಕುಮಾರ್, ಶ್ರೀಕಂಠು, ಪರಶಿವು, ಮಂಜುನಾಥ್, ಸೌಮ್ಯಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net