

ಸುತ್ತೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೊಳಿಸಲು ನನಗೆ ಬಸವಣ್ಣನವರ ಅನ್ನದಾಸೋಹ ಪ್ರೇರಣೆ ನೀಡಿತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.
ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಭಜನಾ ಮೇಳ, ಸೋಬಾನೆಪದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.
ಹಸಿದವರ ಮುಂದೆ ವೇದಾಂತ ಬೇಡ ಎನ್ನುವ ತತ್ವವನ್ನು ಅಳವಡಿಸಿಕೊಂಡಿದ್ದ ಬಸವಣ್ಣ ಅನ್ನದಾಸೋಹ ಮಾಡಬೇಕು ಎನ್ನುವ ಸಂದೇಶ ಸಾರಿದ್ದರು. ಅದನ್ನು ಸುತ್ತೂರು, ಸಿದ್ಧಗಂಗಾ ಸೇರಿದಂತೆ ನಾಡಿನ ಮಠಗಳು ಪಾಲಿಸಿಕೊಂಡು ಬಂದಿದ್ದರಿಂದ ಅದೆಷ್ಟೋ ಜನರ ಹಸಿವು ನೀಗಿದೆ ಎಂದರು.
ಇದೇ ತತ್ವ್ತದಡಿ ನಾನು ಮುಖ್ಯಮಂತ್ರಿ ಅಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಅಕ್ಷರ ದಾಸೋಹ ಜಾರಿಗೊಳಿಸಲಾಯಿತು. ಆಗ ರಾಜ್ಯದಲ್ಲಿ ಮೂರು ವರ್ಷ ಭೀಕರ ಬರ ಬಂದಾಗಲೂ ‘ಅಕ್ಷರ ದಾಸೋಹ ನಿಲ್ಲಬಾರದು. ಅದಕ್ಕಾಗಿ ವಾರ್ಷಿಕವಾಗಿ ಖರ್ಚಾಗುವ 300 ಕೋಟಿ ರೂ. ಅನ್ನು ಕಾಯ್ದಿರಿಸಬೇಕು’ ಎಂದು ಹಣಕಾಸು ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೆ. ಇದು ಈಗಲೂ ನಡೆದುಕೊಂಡು ಬರುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದರು.
ಡಾ.ರಾಜ್‌ಕುಮಾರ್ ಪ್ರಕರಣ, ಕಾವೇರಿ ಸೇರಿದಂತೆ ಇನ್ನಿತರ ಸಂಕಷ್ಟದ ಸಮಯದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವರು ನನಗೆ ಧೈರ್ಯ ತುಂಬಿ ಆಶೀರ್ವಾದ ಮಾಡಿದ್ದನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸುತ್ತೂರು ಮಠ ಮೈಸೂರು ಭಾಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿಯೇ ಈಗ ಗುರುಸ್ಥಾನದಲ್ಲಿ ಇದೆ. ಶ್ರೀಮಠದ ಅನ್ನ, ಅಕ್ಷರ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಕಾರ್ಯಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿದರು. ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯಪೀಠದ ತಪೋರತ್ನ ಕರುಣಾದೇವಿ ಮಾತಾ, ಧಾರವಾಡದ ಗುರುಬಸವ ಮಹಾಮನೆಯ ಶ್ರೀಬಸವಾನಂದ ಸ್ವಾಮೀಜಿ, ಮಂಡ್ಯ ಸಂಸದೆ, ಚಿತ್ರನಟ ಡಾರ್ಲಿಂಗ್ ಕೃಷ್ಣ, ಅನಿವಾಸಿ ಭಾರತೀಯ ಎಸ್.ಕೆ.ಮಂಜುನಾಥ್ ಇತರರಿದ್ದರು.