

ಡಂಬಳ: ಉತ್ತಮ ಮಾರ್ಗದಲ್ಲಿ ಬದುಕು ಸಾಗಿಸಬೇಕು ಎಂದು ಭಕ್ತರಿಗೆ ಸಲಹೆ ನೀಡುವ ಮೂಲಕ ಲಿಂ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಬಸವಣ್ಣನವರಂತೆ ಬದುಕಿದ್ದರು ಎಂದು ತೋಂಟದ ಡಾ. ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ಡಂಬಳದ ತೋಂಟದಾರ್ಯ ಕಲಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 281ನೇ ಜಾತ್ರಾ ಮಹೋತ್ಸವ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಲಿಂ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಜನರನ್ನು ಜ್ಞಾನ ಜ್ಯೋತಿಯನ್ನಾಗಿ ಮಾಡಲು 600ಕ್ಕೂ ಅಧಿಕ ಗ್ರಂಥಗಳನ್ನು ಪ್ರಕಟಿಸಿದರು. ಜಾತಿ- ಮತ ಮರೆತು ಜಾತ್ರೆಯನ್ನು ಜನಸಾಮಾನ್ಯರ ಜಾತ್ರೆಯನ್ನಾಗಿ ಮಾಡಿದರು ಎಂದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಲಿಂ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಕಪ್ಪತಗುಡ್ಡದ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದರು. ಅದರ ಫಲವಾಗಿ ಸರ್ಕಾರ ವನ್ಯಜೀವಿಧಾಮ ಸಂರಕ್ಷಣಾ ಅರಣ್ಯ ಪ್ರದೇಶ ಎಂದು ಘೊಷಣೆ ಮಾಡಿದೆ. ತೋಂಟದ ಶ್ರೀಗಳ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಜನರಲ್ಲಿ ಶಾಶ್ವತವಾಗಿ ಉಳಿದಿವೆ. ಇಂದು ತೋಂಟದಾರ್ಯ ಮಠದ ಅನ್ನ ದಾಸೋಹ ಜತಗೆ ಅಕ್ಷರ ದಾಸೋಹವನ್ನೂ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಂಬಳ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಡಂಬಳ ತೋಂಟದಾರ್ಯ ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ಉಪಾಧ್ಯಕ್ಷ ರೇವಣ್ಣಸಿದ್ದಪ್ಪ ಕರಿಗಾರಿ, ವಿ.ಎಸ್. ಯರಾಶಿ, ಜಿ.ವಿ. ಹಿರೇಮಠ, ಡಂಬಳ ಗ್ರಾಪಂ ಅಧ್ಯಕ್ಷೆ ಬಸಮ್ಮ ಯಲ್ಲಪ್ಪ ಹಾದಿಮನಿ, ಉಪಾಧ್ಯಕ್ಷೆ ಯಲ್ಲಮ್ಮ ಶರಣಪ್ಪ ಬಂಡಿ, ಬಸವಂತಪ್ಪ ಪಟ್ಟಣಶೆಟ್ಟರ, ನಿಂಗಪ್ಪ ಹಡಪದ, ಮಲ್ಲಪ್ಪ ಮಠದ, ಪ್ರಕಾಶ ತಳವಾರ, ತೋಟಪ್ಪ ಕರದಾನಿ, ಗಂಗಣ್ಣ ಸೊರಟೂರ, ಡಂಬಳ ಗ್ರಾಪಂ ಸದಸ್ಯರು ಇದ್ದರು. ಕೆ.ಬಿ. ಕಂಬಳಿ ಕಾರ್ಯಕ್ರಮ ನಿರ್ವಹಿಸಿದರು.