

ಬೆಳಗಾವಿ : ಜಗಜ್ಯೋತಿ ಬಸವಣ್ಣನವರ ತತ್ವ,ಆದರ್ಶಗಳು ಸಮಾಜದ ಪ್ರತಿಯೊಬ್ಬರಿಗೂ ದಾರಿ ದೀಪಗಳಿದ್ದಂತೆ, ಅವುಗಳನ್ನು ಅನುಸರಿಸಿ, ಸಂಸ್ಕಾರವಂತರಾಗಬೇಕು ಎಂದು ನಗರದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿಗಳು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಸೇವಾ ಸಮಿತಿ ವಡಗಾವಿ, ಖಾಸಬಾಗ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸ ನಿಮಿತ್ತ ’ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿ ಧಾರಣೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಾದಯಾತ್ರೆಯು ವಡಗಾವಿಯ ಸಂಭಾಜಿ ನಗರದ ಗಣೇಶ ಗುಡಿಯಿಂದ ಆರಂಭಗೊಂಡು ಪಾಟೀಲ ಗಲ್ಲಿ, ವಜೆಗಲ್ಲಿ, ಚಾವಡಿಗಲ್ಲಿಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಸಾಗಿತು.ಬಳಿಕ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು.
ಪಾದಯಾತ್ರೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ ರೊಟ್ಟಿ, ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷ ಡಾ. ಎಸ್ ಎಂ ದೊಡ್ಡಮನಿ, ನಗರ ಸೇವಕಿ ಸಾರಿಕಾ ಪಾಟೀಲ, ಮಾಜಿ ನಗರಸೇವಕ ದೀಪಕ ಜಮಖಂಡಿ, ಅಶೋಕ ಮಳಗಲಿ, ಸಿ.ಎಂ. ಬೂದಿಹಾಳ, ಸಂಜಯ್ ಜಮಖಂಡಿ, ಸಂಜಯ್ ಅಂಗಡಿ, ರಾಜು ಕುಂದುಗೊಳ, ಮಹಾಂತೇಶ್ ವಾಲಿ,ಆನಂದ್ ಹರತಿ ಹಾಗೂ ಲಿಂಗಾಯತ ಮಹಿಳಾ ಮಂಡಲದ ಸದಸ್ಯರಯರು ಪಾಲ್ಗೊಂಡಿದ್ದರು.