

ಬೆಂಗಳೂರು:ಶ್ರಮ ಸಂಸ್ಕೃತಿ, ಸಮ ಸಮಾಜದ ಪರಿಕಲ್ಪನೆ ಮತ್ತು ಜ್ಞಾನದ ಬೆಳಕು ಬೆಳಗಿದ ಬಸವಣ್ಣ ಮಹಾ ಮಾನವತಾವದಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.
ರಾಜಾಜಿನಗರ ಕ್ಷೇತ್ರದ ಮೋದಿ ಆಸ್ಪತ್ರೆ ರಸ್ತೆಯ ವೆಸ್ಟ್ ಆಫ್ ಕಾರ್ಡ್ ರೋಡ್ ಜಂಕ್ಷನ್ ಬಳಿ ಪ್ರತಿಷ್ಠಾಪಿಸಿದ ‘ಜಗಜ್ಯೋತಿ ಬಸವಣ್ಣ’ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಪ್ರತಿ ಕೆಲಸಕ್ಕೂ ಗೌರವ ಇದೆ ಎಂದು ಬಸವಣ್ಣ ಪ್ರತಿಪಾದಿಸಿದವರು. ಸಮಾಜದಲ್ಲಿದ್ದ ಜಡತೆ, ಅಂಧಶ್ರದ್ಧೆ ಮತ್ತು ಅಸಮಾನತೆಯನ್ನು ನಿರ್ಮೂಲನೆಗೆ ಶ್ರಮಿಸಿ ಸಮಸಮಾಜ ಅಗತ್ಯವನ್ನು ಸಾರಿಹೇಳಿದರು. ಶ್ರೀಸಾಮಾನ್ಯರ ಧ್ವನಿಯಾಗಿದ್ದ ಬಸವಣ್ಣನ ಉಪದೇಶಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ಬರಬೇಕು. ಅವರ ತತ್ವಗಳು ಎಲ್ಲ ಜೀವನದಲ್ಲಿ ಬೆಳಗುವಂತಾಗಬೇಕು ಎಂದು ಹೇಳಿದರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ನಾನು ಬಸವಣ್ಣ ಕಾರ್ಯಕ್ಷೇತ್ರದಿಂದ ಬಂದವನು. ಅವರ ಬಗ್ಗೆ ಹೆಚ್ಚಿನ ಅಭಿಮಾನ ಇಟ್ಟುಕೊಂಡಿದ್ದೇನೆ. ಮಹಾಪುರುಷರ ಆದರ್ಶ, ತತ್ವ ಮತ್ತು ಸಿದ್ಧಾಂತ ಎಲ್ಲ ಕಾಲಕ್ಕೂ ಪ್ರಸ್ತುತ. ಯುವಜನಾಂಗವು ಬಸವಣ್ಣನವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯವನ್ನು ಎತ್ತಿಹಿಡಿದು ಸಮಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ, ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿರುವುದು ಅನುಭವ ಮಂಟಪ. ವಚನ ಸಾಹಿತ್ಯ ಮೂಲಕ ಬಸವಣ್ಣ ಸಮಾಜವನ್ನು ಪರಿವರ್ತನೆ ಮಾಡಿದ್ದವರು ಎಂದು ವಿಶ್ಲೇಷಿಸಿದರು.
ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ಗೋಪಾಲಯ್ಯ, ಸುರೇಶ್ ಕುಮಾರ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಸವ ಧರ್ಮ ಪೀಠದ ಮಾತೆ ಗಂಗಾದೇವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಮತ್ತಿತರರಿದ್ದರು.
43 ಕಿಮೀ ಡಬಲ್ ಡೆಕ್ಕರ್ ನಿರ್ಮಾಣ
ಆಡಳಿತಕ್ಕೆ ಸುಧಾರಣೆಗಾಗಿ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಯನ್ನಾಗಿ (ಜಿಬಿಎ) ರಚಿಸಲಾಗಿದೆ. ಬೆಂಗಳೂರು ಉಸ್ತುವಾರಿ ಮಂತ್ರಿಯಾಗಿ ರಾಜಧಾನಿಗೆ ಹೊಸ ರೂಪ ಕೊಡಲು ನಿರ್ಧರಿಸಿದ್ದೇನೆ. 2 ಕೋಟಿ ಜನರಿಗೆ ನಗರ ಆಶ್ರಯ ನೀಡಿರುವ ನಗರ ಇದು. ಸಂಚಾರ ಸಿಕ್ಕು ನಿವಅರಣೆಗೆ 116 ಮೇಲೇತ್ಸುವೆಗಳನ್ನು ನಿರ್ಮಿಸಲಾಗುತ್ತಿದೆ. ರಾಜಕಾಲುವೆ, ರಸ್ತೆ ಅಭಿವೃದ್ಧಿ ಮತ್ತು ಕಸ ನಿರ್ವಹಣೆ ಕೆಲಸಗಳು ನಡೆಯುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಆಸ್ತಿ ರಕ್ಷಣೆಗೆ ಇ-ಖಾತಾ ವ್ಯವಸ್ಥೆ ತರಲಾಗಿದೆ. ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ. ರಾಜಕೀಯದಲ್ಲಿ ಟೀಕಿಸುವುದು ಸಾಮಾನ್ಯ. ಟೀಕೆ ಸೇರಿ ಎಲ್ಲ ಸವಾಲು ಎದುರಿಸಿ ಕೆಲಸ ಮಾಡಬೇಕು. ರಾಜಾಜಿನಗರ ಕ್ಷೇತ್ರದ ಗಲ್ಲಿಗಲ್ಲಿಯೂ ನನಗೆ ತಿಳಿದಿದೆ. ಕನಕಪುರ ಕ್ಷೇತ್ರದಂತೆ ಈ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ನೇಹಿತರಿದ್ದಾರೆ. ಯಾರಿಗೂ ಅಧಿಕಾರ ಶಾಶ್ವತವಲ್ಲ, ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಬೇಕು ಎಂದರು.
ರಾಜಧಾನಿಯಲ್ಲಿ ಜ್ಞಾನ, ವಿಜ್ಞಾನ, ಭಕ್ತಿಯ ಸಂಗಮದಲ್ಲಿ ಬಸವಣ್ಣ ಪ್ರತಿಮೆಯನ್ನು ನಿರ್ಮಿಸಿರುವುದು ಅಭಿನಂದನೀಯ. ಕಾಯಕ ತತ್ವವನ್ನು ನೆಚ್ಚಿಕೊಂಡು ಜ್ಞಾನ, ಭಕ್ತಿಯನ್ನು ಜಗತ್ತಿಗೆ ಸಾರಿದ್ದ ಬಸವಣ್ಣ ಸಾರ್ವಕಾಲಿಕ ಸಾಧಕ.
| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ.