ಸಮಸಮಾಜ ಸಂದೇಶ ಸಾರಿದ ಬಸವಣ್ಣ ಸರ್ವಕಾಲಕ್ಕೂ ಪ್ರಸ್ತುತ: ಜಿ.ಟಿ.ದೇವೇಗೌಡ

ಜಿ. ಟಿ. ದೇವೇಗೌಡ
Published on

ಮೈಸೂರು: ಹನ್ನೆರಡನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಸಮಾನತೆ ಸೇರಿದಂತೆ ಹಲವು ಚಿಂತನೆಗಳಿಗೆ ಬಸವಣ್ಣನವರು ಮುನ್ನುಡಿ ಬರೆದು ಐತಿಹಾಸಿಕ ಕ್ರಾಂತಿ ಮಾಡಿದ್ದರು ಎಂದು ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದರು.

ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ, ಸಂಸ್ಥೆಗಳಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮ ಬಸವ ಜಯಂತಿ-2025’ ನಮ್ಮ ನಡೆ ಅನುಭವ ಮಂಟಪದ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯ ಕಲ್ಯಾಣ ಹಾಗೂ ಸಮೃದ್ಧಿ ಆಡಳಿತಕ್ಕಾಗಿ ಶ್ರಮಿಸಿದ ಬಸವಣ್ಣ ತಮ್ಮ ಇಡೀ ಬದುಕಿನುದ್ದಕ್ಕೂ ಬಡವರ ಪರವಾಗಿ ಕೆಲಸ ಮಾಡಿದ್ದರು. ಅವರ ಆಶಯದಂತೆ ನಾವೆಲ್ಲ ಇಂದು ನಡೆಯಬೇಕು ಎಂದು ಹೇಳಿದರು.

ಎಲ್ಲರಲ್ಲೂ ಸಮಾನತೆ ಕಾಣಬೇಕು ಎಂದು ಬಯಸಿದ ಬಸವಣ್ಣ ಒಂದು ವರ್ಗ, ಧರ್ಮಕ್ಕೆ ಸೀಮಿತವಾಗಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅವರ ವಚನಗಳು ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತಹ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.

ವಚನ ಸಾಹಿತ್ಯವು ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ತತ್ವ ನೀಡುತ್ತದೆ. ತಾನು ಬದುಕಿ, ಪರರನ್ನು ಬದುಕಿಸಬೇಕು. ಹಾಗಾದರೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿಯಾಗಲಿದೆ. ನಾವು ಮೌಢ್ಯ ಬಿಟ್ಟು ವೈಜ್ಞಾನಿಕ ವಿಚಾರಗಳನ್ನು ಅರಿಯಬೇಕು ಎಂದು ಹೇಳಿದರು.

ಬಸವಾದಿ ಶರಣರು ನೀಡಿದ ಸಂದೇಶವನ್ನು ವೀರಶೈವ ಮಠಮಾನ್ಯಗಳು ಈಗಲೂ ಮುಂದುವರಿಸಿಕೊಂಡು ಬರುತ್ತಿವೆ. ಅಕ್ಷರ, ಅನ್ನದಾಸೋಹದ ಮೂಲಕ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕೆ ಸಿದ್ಧಗಂಗಾ, ಸುತ್ತೂರು ಮಠವೇ ಸಾಕ್ಷಿ ಎಂದರು.

ಅನುಭವ ಮಂಟಪದ ಮೂಲಕ ಅಂತರ್ಜಾತಿ ವಿವಾಹ, ದೇವದಾಸಿ ಪದ್ಧತಿ ನಿರ್ಮೂಲನೆ, ಅಸ್ಪಶ್ಯತೆ, ಮೌಢ್ಯ ನಿವಾರಣೆಗೆ ಶ್ರಮಿಸಿದರು. ಜಾತಿ, ಧರ್ಮಕ್ಕಿಂತ ಬಸವಾದಿ ಶರಣರ ಸಂದೇಶಗಳನ್ನು ಯುವಜನತೆಗೆ ಮುಟ್ಟಿಸಬೇಕು. ಆದರೆ ಮಹನೀಯರನ್ನು ನಾವು ನೋಡುತ್ತಿರುವ ದೃಷ್ಟಿಕೋನವೇ ಬೇರೆಯಾಗಿದೆ ಎಂದು ವಿಷಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net