ಬಸವಣ್ಣ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಏ.1ರಿಂದ

MND jatre
Published on

ಮುಂಡಗೋಡ: ಬಸವಣ್ಣ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಏ.1ರಿಂದ 8ರವರೆಗೆ ಜರುಗಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸಿ.ಎಸ್. ಗಾಣಿಗೇರ ಹೇಳಿದರು.

ಪಟ್ಟಣದ ಬಸವಣ್ಣ ಹಾಗೂ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಥೋತ್ಸವವೂ ಕಳೆದ 33ವರ್ಷಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ಹೊಸದಾಗಿ ದೇವಸ್ಥಾನ ಮತ್ತು ರಥ ನಿರ್ಮಿಸಲಾಗಿದೆ. ಏ.1ರಿಂದ 5ರವರೆಗೆ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ ಹಾವೇರಿ ಜಿಲ್ಲೆಯ ಅಗಡಿಯ ಅಕ್ಕಿಮಠದ ಡಾ.ಗುರುಲಿಂಗಮಹಾಸ್ವಾಮಿಗಳಿಂದ ಜೀವನ ದರ್ಶನ ಪ್ರವಚನ ನಡೆಯಲಿದೆ ಎಂದರು.

ಏ. 5ರಂದು ಸಂಜೆ 4ಕ್ಕೆ ಉತ್ಸವ ಬಸವಣ್ಣಮೂರ್ತಿ ಹಾಗೂ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ನಂತರ ಧರ್ಮಸಭೆ ನಡೆಯಲಿದೆ. ಜಾತ್ರಾ ಸಮಿತಿ ಅಧ್ಯಕ್ಷ ಉಮೇಶ ಬಿಜಾಪುರ ಅಧ್ಯಕ್ಷತೆ ವಹಿಸುವರು. ಶಾಸಕ ಶಿವರಾಮ ಹೆಬ್ಬಾರ, ಸಾಂಸ್ಕೃತಿಕ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವಾನಾಥ ಹಿರೇಮಠ, ಸಹಾಯಕ ಅರಣ್ಯ ಸಂರಕ್ಷಣಾಕಾರಿ ಎಸ್.ಎಂ. ವಾಲಿ ಇತರರು ಪಾಲ್ಗೊಳ್ಳುವರು. ಏ.6ರಂದು ರಥೋತ್ಸವ ಜರುಗುವುದು. 7ರಂದು ಸಂಜೆ ಲಕ್ಷದೀಪೋತ್ಸವ, 8ರಂದು ಕುಸ್ತಿ ಪಂದ್ಯಾವಳಿ ಜರುಗಲಿವೆ ಎಂದರು.

ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಎಂಟುದಿನಗಳ ಜಾತ್ರೆ ಮಹೋತ್ಸವ ಹಳೂರ ಹಿರೇಮಠದ ರುದ್ರಮುನಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿವೆ ಎಂದರು.

ಜಾತ್ರಾ ಸಮಿತಿ ಅಧ್ಯಕ್ಷ ಉಮೇಶ ಬಿಜಾಪುರ, ರಾಮಣ್ಣ ಕುನ್ನೂರ, ನಾಗಭೂಷಣ ಹಾವಣಗಿ, ಣಿರಾಜ ಹದಳಗಿ, ಸಿದ್ಧಾರೂಢ ಅಂಗಡಿ, ಬಿ.ಎಂ. ಕೋಟಿ, ಮಂಜುನಾಥ ಪಾಟೀಲ, ಸಂಗಮೇಶ ಕೊಳ್ಯಾನವರ, ರಾಜಶೇಖರ ಹುಬ್ಬಳ್ಳಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net