

ಮಂಡ್ಯ: ಹನ್ನೆರಡನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಜಗಜ್ಯೋತಿ ಬಸವೇಶ್ವರರು ಶ್ರಮಿಸಿದ್ದರು. ಅವರ ಆದರ್ಶವನ್ನು ಪಾಲಿಸುವುದರ ಜತೆಗೆ ಸಿದ್ದಾಂತಗಳನ್ನು ಕಾರ್ಯರೂಪಕ್ಕೆ ತಂದರೆ ಬಸವೇಶ್ವರರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿ ಹಾಗೂ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಹತ್ತಾರು ರೀತಿಯ ತಾರತಮ್ಯ ಮತ್ತು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅವೆಲ್ಲವುಗಳಿಗೆ ಬಸವಣ್ಣನವರ ಮಾತುಗಳು ಪರಿಹಾರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಬಡತನ, ನಿರುದ್ಯೋಗ, ಕೃಷಿ ಬಿಕ್ಕಟ್ಟಿನ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಬಡವರು ಬಡವರಾಗಿಯೇ ಇದ್ದಾರೆ. ಕೆಲವೇ ಕೆಲವರು ಶ್ರೀಮಂತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಸವೇಶ್ವರರ ತತ್ವಸಿದ್ದಾಂತಗಳು ಮತ್ತು ಮಾರ್ಗದರ್ಶದ ಅಂಶಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿಗೊಳಿಸಬೇಕಿದೆ ಎಂದ ಅವರು, ಬಡತನ ನಿರ್ಮೂಲನೆ ಪ್ರತಿಯೊಬ್ಬರಿಗೂ ಸಮಾನತೆ ತಂದುಕೊಡುವ ಆಶಯದೊಂದಿಗೆ ಕಳೆದ ಮೂರೂವರೆ ತಿಂಗಳಿಂದ ಪಂಚರತ್ನ ಯಾತ್ರೆ ನಡೆಸಲಾಗುತ್ತಿದೆ. ಬಡತನ ನಿರ್ಮೂಲನೆ ಜೆಡಿಎಸ್ ಕನಸು. ಪ್ರಸ್ತುತ ತಾಯಂದಿರು ಕಣ್ಣಲ್ಲಿ ನೀರಾಕುವ ದೃಶ್ಯ, ನಿರುದ್ಯೋಗ, ಕೃಷಿ ಸಮಸ್ಯೆಗಳನ್ನು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಕುಟುಂಬವೂ ಸಮಾನತೆಯ ಹಾಗೂ ತಾರತಮ್ಯವಿಲ್ಲದ ಜೀವನ ತರುವ ಆಶಯದೊಂದಿಗೆ ಯಾತ್ರೆ ನಡೆಸಲಾಗುತ್ತಿದೆ. ಇದಕ್ಕಾಗಿ ಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಪಂಚರತ್ನ ಅಂಶಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಘೋಷಿಸಿದರು.
ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಬೆಳೆದವರು. 2006 ವಿಜಯಪುರ ಜಿಲ್ಲೆಯ ಜನರು ಬೆಳ್ಳಿ ಆಸನವನ್ನು ನನಗೆ ಕೊಡುಗೆಯಾಗಿ ಕೊಟ್ಟರು. ಆದರೆ, ಅದರ ಮೇಲೆ ಕೂರಲು ಯೋಗ್ಯನಾದ ವ್ಯಕ್ತಿ ನಾನಲ್ಲ. ಇದನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತೇನೆ ಎಂದೇಳಿ ಅದನ್ನು ಬೆಂಗಳೂರಿಗೆ ತಂದು ವಿಧಾನಸೌಧದ ಎದುರು ಕಾರ್ಯಕ್ರಮ ಆಯೋಜಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಶಿವಕುಮಾರಸ್ವಾಮೀಜಿ ಅವರನ್ನು ಬೆಳ್ಳಿ ಆಸನದ ಮೇಲೆ ಕೂರಿಸಿ ಗೌರವ ಸಲ್ಲಿಸಿದೆ ಎಂದು ಸ್ಮರಿಸಿಕೊಂಡ ಅವರು, ಪಾಂಡವಪುರದ ಪಂಚರತ್ನ ರಥಯಾತ್ರೆ ವೇಳೆಯೂ ರುದ್ರಾಕ್ಷಿಯ ಹಾರವನ್ನು ಅಭಿಮಾನಿಗಳು ತಂದಾಗ, ಅದನ್ನು ನಾನು ಧರಿಸುವುದು ಅಪಚಾರವಾಗುತ್ತದೆ ಎಂದೇಳಿ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಹಾಕಲಾಯಿತು. ಜೀವನದಲ್ಲಿ ಗುರು, ದೇವರನ್ನು ನಂಬಿ ಬದುಕಬೇಕು. ನಾವು ಯಶಸ್ಸು ಕಾಣಬೇಕಾದರೆ ಭಗವಂತನ ಕೃಪೆ, ಗುರುಗಳ ಆಶೀರ್ವಾದ ಬೇಕು. ನಮ್ಮಲ್ಲಿರುವ ಹಲವಾರು ಸಮಸ್ಯೆಗಳಿಗೆ ದೇವರ ಅನುಗ್ರಹ ಬೇಕು ಎಂದು ಭಾವುಕರಾದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರು ಈ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾಯಕ ಮಾಡಿದ್ದಾರೆ. ಜನರಿಗೆ ಅವಶ್ಯಕವಿರುವ ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುತ್ತಿದ್ದಾರೆ. ಯಾವುದೇ ಕುಟುಂಬದಲ್ಲಿ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸ್ಪಂದಿಸುವ ಪ್ರಾಮಾಣಿಕ ಜನಸೇವಕ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನೀವು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಅವರಿಗೆ ಆಶೀರ್ವಾದ ಮಾಡಿದರೆ ಈ ಭಾಗದ ಸಂಪೂರ್ಣ ಅಭಿವೃದ್ಧಿಗೆ ನೆರವಾಗಲಿದೆ ಎಂದು ಮನವಿ ಮಾಡಿದರು.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, 2006ರಲ್ಲಿ ಸಿದ್ದಗಂಗಾ ಶ್ರೀಗಳ ಆರ್ಶೀವಾದ ಪಡೆದು ಎಚ್.ಡಿ.ಕುಮಾರಸ್ವಾಮಿ ಉತ್ತಮ ಆಡಳಿತ ನೀಡಿ ಜನ ಮೆಚ್ಚುಗೆ ಗಳಿಸಿದ್ದರು. 2018ರಲ್ಲಿ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ವೇಳೆ ಬಜೆಟ್‌ನಲ್ಲಿ 198 ಕೋಟಿ ರೂಗಳ ಅನುದಾನವನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಗೆ ನೀಡಿದ್ದರು. ಅದರಿಂದ ಕೆರೆ, ಕಟ್ಟೆಗಳನ್ನು ತುಂಬಿಸುವ ಮೂಲಕ ದುದ್ದ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಬೇಬಿಬೆಟ್ಟದ ಶಿವಬಸವಸ್ವಾಮಿ, ಅವ್ವೇರಹಳ್ಳಿ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಟಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿ.ಪಂ ಮಾಜಿ ಸದಸ್ಯ ಸಿ.ಅಶೋಕ್, ಪಾಂಡವಪುರ ತಾಪಂ ಮಾಜಿ ಅಧ್ಯಕ್ಷ ಟಿ.ಯಶವಂತ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮಲ್ಲೇಶ್, ಗ್ರಾ.ಪಂ ಅಧ್ಯಕ್ಷ ಶಂಕರೇಗೌಡ ಇತರರಿದ್ದರು.