

ಮಂಡ್ಯ: ಸಮಾಜಕ್ಕೆ ಜಗಜ್ಯೋತಿ ಬಸವಣ್ಣನವರ ಕೊಡುಗೆ ಅನನ್ಯವಾಗಿದೆ. ಅವರ ಮೌಲ್ಯ ಮತ್ತು ಚಿಂತನೆಗಳು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತಹದ್ದಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ಕಾಯಕದ ಮಹತ್ವವನ್ನು ಅರಿತು ಪ್ರತಿಯೊಬ್ಬರು ಶ್ರಮಜೀವಿಯಾಗಿ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು. ಕಾಯಕ ಮಾಡುವಾಗ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದಿರಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.
12ನೇ ಶತಮಾನದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರು ಶ್ರಮಿಸಿದರು. ಜಾತಿಪದ್ಧತಿಯನ್ನು ಹೋಗಲಾಡಿಸಿ ಸಮಾನ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿಯನ್ನು ಉಂಟು ಮಾಡಿದರು. ಇಂತಹ ಮಹಾನ್ ವ್ಯಕ್ತಿಯ ವಚನಗಳನ್ನು ಸ್ಮರಿಸಬೇಕು. ವ್ಯಕ್ತಿಯು ಹೇಗಿರಬೇಕು ಹಾಗೂ ವ್ಯಕ್ತಿತ್ವವನ್ನು ಹೇಗೆ ಸರ್ವಾಂಗೀಣವಾಗಿ ರೂಪಿಸಿಕೊಳ್ಳಬೇಕು ಎಂಬ ಬಗೆಯನ್ನು ಬಸವಣ್ಣನವರು ತಮ್ಮ ಪ್ರಮುಖ ವಚನಗಳಲ್ಲಿ ತಿಳಿಸಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ದಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ ಎಂಬ ವಚನದಲ್ಲಿರುವ ಸಪ್ತಸೂತ್ರವನ್ನು ಜನರು ಅಳವಡಿಸಿಕೊಳ್ಳಬೇಕು ಎಂದರು.
ಸಮಾಜವನ್ನು ಬೇಧ ಭಾವ ಮಾಡದೆ ಯಾವ ರೀತಿ ಕಾಣಬೇಕು ಎಂಬ ವೈಖರಿಯನ್ನು ಬಸವಣ್ಣನವರು ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ. ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ ಹಾಗೂ ಇವನಾರವ ಇವನಾರವ ಇವನಾರವನೆಂದೆನಿಸದೆನಯ್ಯ, ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ ಎಂಬ ವಚನಗಳ ಮೂಲಕ ಎಲ್ಲರೂ ನಮ್ಮವರೆಂದು ತಿಳಿಯಬೇಕೆಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ಮೌಲ್ಯ, ಚಿಂತನೆಗಳು ಸೂರ್ಯ ಚಂದ್ರ ಇರುವವರೆಗೂ ಹಾಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪಠ್ಯ ಪುಸ್ತಕದ ಹೊರತಾಗಿ, ಪ್ರತಿ ಮನೆಗಳಲ್ಲೂ ಬಸವಣ್ಣನ ವಿಚಾರಧಾರೆಗಳನ್ನು ತಿಳಿಸುವ ಕಾರ್ಯ ಮಾಡಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಅವವರ ಭಾವಚಿತ್ರವನ್ನು ಕೇವಲ ಗೋಡೆಗೆ ಸೀಮಿತವಾಗಿಸದೆ ಪ್ರತಿಯೊಬ್ಬರು ತಮ್ಮ ಆತ್ಮ ಮತ್ತು ಮನಸ್ಸಿನಲ್ಲಿ ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ. ರಾಜ್ಯ ಸರ್ಕಾರವು ಜಗಜ್ಯೋತಿ ಬಸವೇಶ್ವರ ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದೆ. ಈ ಮುಖಾಂತರ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರಸ್ತುತ ಸಂವಿಧಾನದಲ್ಲಿರುವ ಮೂಲತತ್ವಗಳನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ವೈಜ್ಞಾನಿಕ ಚಿಂತನೆ ನಡೆಸಿ, ಅನುಭವ ಮಂಟಪವನ್ನು ಸ್ಥಾಪಿಸಿ ತಮ್ಮ ವಚನಗಳ ಮೂಲಕ ಇಡೀ ನಾಡಿಗೆ ಪ್ರಕಟ ಮಾಡಿ ದಿಟ್ಟ ಹೋರಾಟ ನಡೆಸಿದ್ದಾರೆ. ಪ್ರತಿನಿತ್ಯವೂ ಅವರ ತತ್ವಗಳನ್ನು ಸ್ಮರಣೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.