

ಮಂಡ್ಯ: ವಿಶ್ವಗುರು ಬಸವಣ್ಣ ತಮ್ಮ ತತ್ವ, ವಕ್ತಿತ್ವ, ಚಿಂತನೆ ಹಾಗೂ ಆದರ್ಶದ ಮೂಲಕ ಜಗತ್ತಿಗೆ ಬೆಳಕಾದವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಹಣ, ಆಡಳಿತದಿಂದ ಪ್ರಖ್ಯಾತಿಯಾದವರಲ್ಲ. ಬದಲಿಗೆ ತಮ್ಮ ವ್ಯಕ್ತಿತ್ವದಿಂದ ಜಗತ್ಪ್ರಸಿದ್ಧಿ ಹೊಂದಿದವರು. ಅವರಂತ ಮತ್ತೊಬ್ಬ ವ್ಯಕ್ತಿ ಜನಿಸಲು ಸಾಧ್ಯವಿಲ್ಲ ಎಂದರು.
ಎಲ್ಲ ಜಾತಿ, ಧರ್ಮದವರು ಒಪ್ಪುವ ಸಾಧಕ ಬಸವಣ್ಣ ಎಂದರೆ ತಪ್ಪಾಗುವುದಿಲ್ಲ. ಸಮಾಜದ ಒಗ್ಗಟ್ಟಿಗಾಗಿ 12ನೇ ಶತಮಾನದಲ್ಲಿ ಅವರು ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಸಮಾಜದ ಒಳಿತು ಹಾಗೂ ಸಮಾನತೆಗಾಗಿ ಮುಂದಿನ ಪೀಳಿಗೆಗೆ ಬಸವಣ್ಣನವರ ತತ್ವ ಮತ್ತು ಆದರ್ಶಗಳ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಕಲ್ಪಿಸಬೇಕೆಂಬ ಅವರ ಚಿಂತನೆ ಇಂದು ಕಾನೂನಿನ ಸಮಾನತೆ ಹಕ್ಕಾಗಿ ಪರಿವರ್ತನೆಗೊಂಡಿದೆ. ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎನ್ನುವಂತಹದ್ದು ಅವರ ಆಶಯವಾಗಿತ್ತು. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಎಸ್.ಶಿವರಾಜಪ್ಪ, 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ತನ್ನ ಜಾತಿಯನ್ನು ತೊರೆದು ವಿಶ್ವ ಧರ್ಮವನ್ನು ಅನುಸರಿಸಿದ ಮಹಾನ್ ವ್ಯಕ್ತಿ. ಅವರ ಚಿಂತನೆ, ತತ್ವ ಆದರ್ಶಗಳನ್ನು ಇಂದಿಗೂ ಪ್ರತಿಯೊಬ್ಬರು ಪಾಲಿಸಬೇಕು. ವಚನವನ್ನು ದೇವರ ಭಾಷೆಯನ್ನಾಗಿಸಿದ ಕೀರ್ತಿ ಬಸವಣ್ಣರಿಗೆ ಸಲ್ಲಬೇಕು. ತಮ್ಮ ವಚನಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿರುವ ಅವರು ಜೀವನದ ಕಲೆಶಿಲ್ಪಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಇತರರಿದ್ದರು.