

ಮಂಡ್ಯ: ವಿಶ್ವಗುರು ಬಸವಣ್ಣ ಸಹ ಬಾಳ್ವೆಗಾಗಿ ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದ ಮಾಡಬಾರದೆಂದು ಸಮಾನತೆ ಸಾರಿದ ಮಹಾ ಪುರುಷ ಎಂದು ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ ಬಣ್ಣಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಬಸವಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಕೂಡಲಸಂಗಮದಲ್ಲಿ ದೀಕ್ಷೆ ಪಡೆದವರು. ಜಾತಿ ಭೇದವಿಲ್ಲದೆ ಸಮಾನತೆ, ಏಕತೆಗಾಗಿ ಎಲ್ಲರೂ ದುಡಿಯೋಣವೆಂದು ಕರೆ ನೀಡಿದವರು ಎಂದರು.
ತುಳಿತಕ್ಕೊಳಗಾದ ಜನರ ಧ್ವನಿಯಾಗಿ ಬಸವಣ್ಣ ನಿಂತಿದ್ದರು. ಅವರ ತತ್ವ ಆದರ್ಶ ಇವತ್ತಿಗೂ ಪ್ರಸ್ತುತ. ಎಲ್ಲ ಜಾತಿಗಳ ನಡುವೆ ಸಮಾನತೆ ಮೂಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸಂಘರ್ಷವನ್ನು ದ್ವೇಷಿಸಿ, ಶಾಂತಿಯನ್ನು ಸಾರಿದ ಮಹಾನ್ ವ್ಯಕ್ತಿ ಬಸವಣ್ಣ ಎಂದು ಹೇಳಿದರು.
ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಬಸವಣ್ಣನ ವಚನಗಳು ಸರ್ವಕಾಲಕ್ಕೂ ಸಾರ್ವತ್ರಿಕವಾದವು. ಮನುಕುಲದ ಉಳಿವು ಹಾಗೂ ವಿಶ್ವ ಶಾಂತಿಗಾಗಿ ಬಸವಣ್ಣ ಜಾತ್ಯಾತೀತವಾಗಿ ಎಲ್ಲರೂ ಸಮಾನತೆಯಿಂದ ಇರಬೇಕೆಂದು ಹೇಳಿದರು. ರಾಜ್ಯಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಮಾತ್ರವಲ್ಲದೆ ಬಸವಣ್ಣನ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದೆ. ಕಾಯಕ ಸಿದ್ಧಾಂತವನ್ನೇ ಮೂಲ ಮಂತ್ರವಾಗಿಸಿಕೊಂಡು ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ ಮಹಾನ್ ಪುರುಷ ಬಸವಣ್ಣ ಅವರ ಆದರ್ಶವನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.
ಶುಶ್ರೂಷಕಿಯರಾದ ರಕ್ಷಿತಾ, ರಾಧಾ, ದಿವ್ಯಾ ಇತರರಿದ್ದರು.