ಬಸರಾಳಿನಲ್ಲಿ ಬಸವಣ್ಣ ಜಯಂತಿ ಸಂಭ್ರಮ: ಶಾಸಕ ರವಿಕುಮಾರ್ ಗಣಿಗ ಭಾಗಿ

Basavanna Jayanti celebrations in Basaralu mandya
Published on

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಬಸರಾಳು-ಕೊಪ್ಪ ರಸ್ತೆಯಲ್ಲಿರುವ ನಂದಿ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕ ನೆರವೇರಿಸಲಾಯಿತು. ನಂದಿ ಬಸವೇಶ್ವರಸ್ವಾಮಿಗೆ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ನಡೆಯಿತು. ಅಂತೆಯೇ ಜಗಜ್ಯೋತಿ ಗುರು ಬಸವೇಶ್ವರರ ಪುತ್ತಳಿಗೆ ಹೂವಿನ ಅಲಂಕಾರ ಮಾಡಿದ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು. ವೀರಗಾಸೆ, ತಮಟೆ, ಮಂಗಳವಾದ್ಯ ಕಲಾತಂಡ ಮೆರಗು ನೀಡಿದವು. ಜಯಂತಿ ಹಿನ್ನೆಲೆಯಲ್ಲಿ ನಂದಿ ಬಸವೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಮುಖ್ಯರಸ್ತೆಗೆ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು

ಜಯಂತ್ಯುತ್ಸವದ ಅಂಗವಾಗಿ ಬಸರಾಳು ಗ್ರಾಮಸ್ಥರು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಸಹಯೋಗದಲ್ಲಿ ಬಸವೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಅನ್ನದಾಸೋಹ ಆಯೋಜಿಸಲಾಗಿತ್ತು. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಅನ್ನ, ಸಾಂಬಾರ್, ಮಜ್ಜಿಗೆ, ಪಲ್ಯ, ಕೋಸಂಬರಿ, ಬೂಂದಿ ಪಾಯಸ ನೀಡಲಾಯಿತು.

ಶಾಸಕ ರವಿಕುಮಾರ್ ಗಣಿಗ ನಂದಿ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಜಯಂತ್ಯುತ್ಸವದಲ್ಲಿ ಭಾಗಿಯಾದರು. ಬಳಿಕ ದ್ವಿತೀಯ ಪಿಯುಸಿಯಲ್ಲಿ ಗರಿಷ್ಟ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ವೀರಶೈವ ಲಿಂಗಾಯತ ಸಮುದಾಯದ 15ಕ್ಕೂ ಹೆಚ್ಚು ಹಿರಿಯರನ್ನ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಅಂತೆಯೇ ಶಾಸಕರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net