

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಣ್ಣ ಪ್ರಜಾಪ್ರಭುತ್ವದ ಬೀಜ ಬಿತ್ತಿದ ನಾಯಕ. ಭಕ್ತಿ ವಿಶಿಷ್ಟತೆಯನ್ನು ಜಗತ್ತಿಗೆ ಸಾರಿದ ಧರ್ಮ ಸುಧಾರಕ, ಮಹಾನ್ ಮಾನವತಾವಾದಿ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವೇಶ್ವರರು ಧಾರ್ಮಿಕ ಸಂಪ್ರದಾಯ, ಮೂಢನಂಬಿಕೆಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಸಮಾಜದಲ್ಲಿ ಸಮಾನತೆ, ಸಹೋದರತ್ವ, ಸ್ತ್ರೀ ಸಬಲೀಕರಣ ವಿಚಾರಗಳನ್ನು ಎತ್ತಿ ಹಿಡಿದರು. 12ನೇ ಶತಮಾನದಲ್ಲಿ ಸಾಂಪ್ರದಾಯಸ್ಥ ಸಮಾಜವನ್ನು ಪರಿವರ್ತನೆಗೊಳಿಸಲು ಪ್ರಯತ್ನಿಸಿ ಜನರಿಗೆ ಭಕ್ತಿಯನ್ನು ಬೋಧಿಸಿ ಮಹಾನಾಯಕ ಎಂಬ ಗೌರವ ಪಡೆದರು ಎಂದರು.
ಬಸವೇಶ್ವರರ ಜೀವನ, ಕಾಯಕ, ದಾಸೋಹ ತತ್ವಗಳ ಕುರಿತು ಮಹಾಂತ ದೇಸಾಯಿ ಉಪನ್ಯಾಸ ನೀಡಿದರು.
ಡಾ. ಆರ್.ವಿ. ಚಿಟಗುಪ್ಪಿ ನಿರೂಪಿಸಿದರು. ಶ್ರೀಕಾಂತ ರಾಗಿಕಲ್ಲಾಪುರ, ರೋನಿಲ ಮನೋಹರ, ಎನ್.ಜಿ. ಪುಡಕಲಕಟ್ಟಿ, ಅವಿನಾಶ ಹೊಳಿಹೊಸುರ, ನವೀನ ಬಡಿಗೇರ, ಶಿಲ್ಪಾ ನಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.