

ಚಿಕ್ಕಮಗಳೂರು: ಅಸ್ಪಶ್ಯತೆ, ಅಸಮಾನತೆ, ಮೇಲು-ಕೀಳು ಎಂಬ ಅಸಮಾನತೆ ತೊರೆದು ಸರ್ವರು ಸಮಾನರೆಂಬ ಸಂದೇಶ ಸಾರಿದವರು ಕಾಯಕ ಯೋಗಿ ಬಸವಣ್ಣ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.
ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಶನಿವಾರ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾತಂತ್ರವನ್ನು ರೂಪಿಸಲು ಅಂದಿನ ಕಾಲಘಟ್ಟದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿದರು. ಸರ್ಕಾರಗಳು ಬಸವಣ್ಣರ ತತ್ವ ಹಾಗೂ ನಾವೆಲ್ಲರೂ ಒಂದೇ ಎಂಬ ಅಂಶಗಳನ್ನು ಸಂವಿಧಾನದಡಿ ಜಾರಿಗೊಳಿಸಿದರೆ ದೇಶದಲ್ಲಿ ಜಾತೀಯತೆ ತೊಲಗಿ, ಸರ್ವರು ಸಮಾನವಾಗಿ ಜೀವಿಸಲು ಸಾಧ್ಯ ಎಂದರು.
12ನೇ ಶತಮಾನದ ಕಾಲಘಟ್ಟದಲ್ಲಿ ಮೂಲ ನಿವಾಸಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣಲಾಗುತ್ತಿತ್ತು. ಈ ವೇಳೆ ಬಸವಣ್ಣ ನವರು ಸಮಾಜದಲ್ಲಿ ತುಳಿತಕ್ಕೆ ಒಳಗಾದ ದೀನ ದಲಿತರ ಬಗ್ಗೆ ಹೆಚ್ಚು ಕಾಳಜಿವಹಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನಾಡಿಗೆ ಹಬ್ಬಿಸಿದರು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನದಲ್ಲಿ ಬಸವಣ್ಣನವರ ಅನೇಕ ಅಂಶಗಳು ಒಳಗೊಂಡಿವೆ. ಯಥಾವತ್ತಾಗಿ ಸಂವಿಧಾನ ದೇಶದಲ್ಲಿ ಜಾರಿಗೊಳಿಸಿದರೆ ಬಡವ ಶ್ರೀಮಂತ, ಮೇಲುಕೀಳು, ಅಸಮಾನತೆ ಎಲ್ಲವೂ ನಾಶವಾಗಿ ಭಾರತ ಅದ್ಭುತ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಮುಖಂಡರಾದ ಹೊನ್ನಪ್ಪ, ಕಲಾವತಿ, ಟಿ.ಎಚ್.ರತ್ನ, ಜಯಚಂದ್ರ, ಶಂಕರ್, ಜಯಮ್ಮ, ಶಿವಣ್ಣ , ನಂಜಮ್ಮ ಮತ್ತಿತರರಿದ್ದರು.