

ಚನ್ನರಾಯಪಟ್ಟಣ: ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಮೇಗಲಕೇರಿ ಕಾಡುಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚನ್ನರಾಯಪಟ್ಟಣ ತಾಲೂಕು ಘಟಕ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣನವರು. ಇವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಹಾಕಿದ್ದು, ಸಂಸತ್ ರಚನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಬಸವಣ್ಣ ಇಂದಿಗೂ ಪ್ರಸ್ತುತ ಎಂದರು.
ಇಡೀ ಸಮಾಜವನ್ನು ಸಮ ಸಮಾಜ ಮಾಡುವತ್ತ ಇದ್ದ ಬಸವಣ್ಣನವರ ಕಾಳಜಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರೊಂದಿಗೆ ಕಾಯಕ ತತ್ವ ಸಾರಿದ ಇವರು ಒಂದು ಉತ್ತಮ ಸಮಾಜ ಸೃಷ್ಟಿಯ ಸಂಕೇತವಾಗಿದ್ದರು. ಕಾಯಕ ದಾಸೋಹ ತತ್ವದ ಆಧಾರದ ಮೇಲೆ ಶೋಷಣೆ ರಹಿತ ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದು, ಮಹಿಳೆಯರಿಗೆ ಸಮಾನತೆಯ ಚಿಂತನೆಯೊಂದಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಎಂಬುದು ಬಹಳ ಮಹತ್ವದ್ದು. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ. ಇವರ ತತ್ವಾದರ್ಶಗಳ ಅನುಕರಣೆ ನಮಗೆ ಪ್ರಸ್ತುತವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಸರ್ಪಭೂಷಣ ಮಠ ಹಾಗೂ ಅರಕಲಗೂಡಿನ ದೊಡ್ಡಮಟ್ಟದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ತರುವ ಪ್ರಯತ್ನ ನಡೆದಿರುವುದು ವೀರಶೈವ ಧರ್ಮದಲ್ಲಿ ಮಾತ್ರ. ಮಾಡುವ ವೃತ್ತಿಯನಾಧರಿಸಿ ಜಾತಿಯ ಹಣೆಪಟ್ಟಿ ಕಟ್ಟುವುದು ತರವಲ್ಲ/ ಮನುಷ್ಯ ಜನ್ಮ ದೊಡ್ಡದು ಹುಟ್ಟಿದ ಜನ್ಮದಲ್ಲೇ ಮುಕ್ತಿ ಪಡೆಯುವ ನಿಟ್ಟಿನಲ್ಲಿ ಎಲ್ಲರನ್ನು ಧರ್ಮದ ತಳಹದಿಯಲ್ಲಿ ತರಬೇಕಾದರೆ ಪ್ರತಿಯೊಬ್ಬರಿಗೂ ಲಿಂಗ ಧೀಕ್ಷೆಯಾಗಬೇಕು. ಎಲ್ಲರೂ ಸಮಾನರು ನಾವೆಲ್ಲ ಒಂದೇ ಎಂಬ ಧರ್ಮದ ತಳಹದಿಯಲ್ಲಿ ಬದುಕು ಕಂಡುಕೊಳ್ಳಬೇಕು ಎಂಬ ಸಂದೇಶ ಕೊಟ್ಟ ಏಕೈಕ ಧರ್ಮವೇ ವೀರಶೈವ ಧರ್ಮ ಎಂದರು.
ತಾರತಮ್ಯವೇ ತುಂಬಿದ್ದ ಕಾಲಘಟ್ಟದಲ್ಲಿ ನಾವೆಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಏಕೈಕ ವ್ಯಕ್ತಿ ಬಸವಣ್ಣ. ಅವರು ಹಾಕಿಕೊಟ್ಟ ಮಾರ್ಗ, ತತ್ವ ಆದರ್ಶಗಳನ್ನು ಪ್ರಸ್ತುತ ಸಮಾಜ ಪರಿಪಾಲನೆ ಮಾಡದಿರುವುದು ಶೋಚನೀಯ. ಇನ್ನೂ ಕಾಲ ಮಿಂಚಿಲ್ಲ ಇನ್ನಾದರೂ ಮನುಷ್ಯರ ನಡುವಿನ ವೈರಾತ್ಮ ವೈಶಾಮ್ಯಗಳನ್ನ ಬಿಟ್ಟು, ಜಾತಿ ಧರ್ಮಗಳ ಕಲಹಗಳನ್ನು ಬದಿಗಿಟ್ಟು ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರುವ ಮೂಲಕ ಬಸವಣ್ಣನವರಿಗೆ ಕೀರ್ತಿ ತರಬೇಕೆಂದರು.
ನುಗ್ಗೆಹಳ್ಳಿ-ಆಯ್ಯನಹಳ್ಳಿ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಉಪನ್ಯಾಸಕ ವೀರಭದ್ರಪ್ಪ ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ್ ಮಾತನಾಡಿದರು. ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಾಪುರ ಜಿಲ್ಲೆಯ ಕರಿಭಂಟನಾಳ ಮಠದ ಗುರುಗಂಗಾಧರೇಶ್ವರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಪರಮೇಶ್, ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿಜೆಪಿ ಮುಖಂಡ ಎ.ಸಿ.ಆನಂದ್, ಪುರಸಭಾ ಸದಸ್ಯ ರಾಣಿಕೃಷ್ಣ, ದಿವ್ಯಾ, ಮುಖಂಡರಾದ ಬೆಳಗೀಹಳ್ಳಿ ಪುಟ್ಟಸ್ವಾಮಿ, ಸೋಮಣ್ಣ, ಬಸವರಾಜು, ರಾಜಣ್ಣ, ಎ.ಆರ್. ನಾಗರಾಜು, ಎ.ಪಿನಂದೀಶ್, ಮನೋಹರ್, ಮಣಿಕಂಠ ಮತ್ತಿತರರಿದ್ದರು.