ಬಸವಣ್ಣ ಮಹಾನ್ ಸಮತಾವಾದಿ

Basavanna is a great socialist
Basavanna is a great socialist
Published on

ಮುಧೋಳ: ಕೆಳ ಜಾತಿ ಜನರ ಕೇರಿಗಳಲ್ಲಿ ಸುತ್ತಾಡಿ ಅವರನ್ನು ಶೋಷಣೆಯಿಂದ ಪಾರುಮಾಡಲು ಬಸವಣ್ಣ ಮಾಡಿದ ಪ್ರಯತ್ನ ಐತಿಹಾಸಿಕ ಮಹತ್ವ ಪಡೆದಿದೆ ಎಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪೂರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕನಕ-ಪುರಂದರ ಬಸವಾದಿ ಶರಣರ ಚಿಂತನ ತ್ರೈಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಮಹಾನ್ ಸಮತಾವಾದಿಯಾಗಿದ್ದರು ಎಂದರು.

ಬಸವಣ್ಣ, ಕನಕ-ಪುರಂದರ ಮತ್ತು ಅಂಬೇಡ್ಕರ್ ಬೇರೆ ಬೇರೆ ಕಾಲಮಾನದಲ್ಲಿ ವಿಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದರೂ ಅವರ ಗುರಿ ಮತ್ತು ಧೋರಣೆಗಳಲ್ಲಿ ಹೆಚ್ಚಿನ ಸಾಮ್ಯತೆಗಳಿವೆ. ಈ ದೃಷ್ಟಿಯಿಂದ ಬಸವಾದಿ ಶರಣರ ಮತ್ತು ಅಂಬೇಡ್ಕರ್ ಕುರಿತು ಚಿಂತನೆ ಅವಶ್ಯ ಎಂದರು.

ಹಿರಿಯ ಸಾಹಿತಿ ಎಸ್.ಆರ್. ದಿವಾಣ ಮಾತನಾಡಿ, ಉನ್ನತವಾದುದ್ದನ್ನು ಸಾಧಿಸಿದ ಮಹಾಪುರುಷರ ವೈಯಕ್ತಿಕ ಜೀವನ ಅರಿಯುವುದು ಮುಖ್ಯ ಎಂದರು.

ಯಡಹಳ್ಳಿಯ ಅಡವಿಸಿದ್ಧೇಶ್ವರ ಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ, ಕರ್ಮ ಮತ್ತು ಕತ್ತಲೆಯ ಬಗೆಗೆ ಬಸವಣ್ಣ ವಿರೋಧ ವ್ಯಕ್ತಪಡಿಸಿದ್ದರು. ಬಸವಾದಿ ಶರಣರ ವಚನಗಳನ್ನು ಕ್ರೋಢೀಕರಿಸಿ ಸಾಮಾಜಿಕ ನ್ಯಾಯ ಶೋಧಿಸುವ ಕಾರ್ಯ ಶ್ಲಾಘನೀಯ ಎಂದರು.

ಗಾನಯೋಗಿ ಗುರು ಪಂಚಾಕ್ಷರಿ ತಾಲೂಕು ಕಲಾವಿದರ ಸಂಘದ 25ನೇ ವಾರ್ಷಿಕೋತ್ಸವ ಆಚರಿಸಲಾಯಿತು. ವಿವಿಧ ಕಲಾ ತಂಡಗಳಿಂದ ಜಾನಪದ ಕಲಾ ಪ್ರದರ್ಶನ ಹಾಗೂ ಸಂಗೀತೋತ್ಸವ ಜರಗಿತು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಶ್ಯಾಮಲಾ ಲಕ್ಷ್ಮೇಶ್ವರ ಇದ್ದರು.

ವಿನಯ ತಿಮ್ಮಾಪುರ, ಎಲ್.ಶ್ರೀನಿವಾಸ್ ಪ್ರಸಾದ್, ಗುರುಪ್ರಸಾದ, ಹಿರಿಯ ಕಲಾವಿದರಾದ ಸಂಗಪ್ಪ ಜೋಗಿ ಹಾಗೂ ರಮೇಶ ಸೋಲೋನಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net