

ಚಿಮ್ಮಡ: ಭಾರತದ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣನವರು ಮನುಕುಲದ ಮಂದಾರವಾಗಿದ್ದಾರೆ. ಬಡವರ ನಿಧಿಯಾಗಿ, ವಚನ ಸಾಹಿತ್ಯದ ಸಿರಿಯಾಗಿ, ಅನುಭವ ಮಂಟಪದ ನಿರ್ಮಾಪಕರಾಗಿ, ಯುಗಾವತಾರಿಯಾದ ಬಸವಣ್ಣನವರ ಜೀವನ ದಿವ್ಯದರ್ಶನವಾಗಿದೆ ಎಂದು ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಚಿಮ್ಮಡ ಬಸ್ ನಿಲ್ದಾಣ ಆವರಣದಲ್ಲಿ ಬುಧವಾರ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಬಸವ ನಾಡಿನಲ್ಲಿ ಜನಿಸಿದ ನಮ್ಮ ಜನ್ಮ ಸಾರ್ಥಕವಾಗುವುದು ಎಂದರು.
ಸ್ಥಳೀಯ ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ದನ ಮಹಾರಾಜರು ಮಾತನಾಡಿದರು.
ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗುರಲಿಂಗಪ್ಪ ಪೂಜಾರಿ, ರಾಚಯ್ಯ ಮಠಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪ್ರಭು ಪಾಲಭಾವಿ, ಅಶೋಕ ಧಡೂತಿ, ಪರಪ್ಪ ನೇಸೂರ, ಬಸವರಾಜ ಕುಂಚನೂರ, ಅಶೋಕ ಮೋಟಗಿ, ಪ್ರಭು ಮುಧೋಳ, ಅವ್ವನಪ್ಪ ಮುಗಳಖೋಡ ಮತ್ತಿತರರಿದ್ದರು.
ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದ ನಿಮಿತ್ತ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಸಕಲವಾದ್ಯ ವೃಂದಗಳೊಂದಿಗೆ ಗ್ರಾಮದ ವಿರಕ್ತ ಮಠದಿಂದ ಸ್ಥಳೀಯ ಬಸ್ ನಿಲ್ದಾಣದವರೆಗೆ ಸಂಚರಿಸಿತು.