

ಸಕಲೇಶಪುರ: ಪ್ರಪಂಚದಲ್ಲೇ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರವನ್ನು ನೀಡಿದ ಮೊದಲಿಗರು ಬಸವಣ್ಣ ಎಂದು ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ಶ್ರೀ ಮಲೆನಾಡು ವೀರಶೈವ ಸಮಾಜ ಗುರುವಾರ ಹಮ್ಮಿಕೊಂಡಿದ್ದ ಬಸವೇಶ್ವರರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ, ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಬಸವಣ್ಣ ಹಲವು ಕಟ್ಟಳೆಗಳೊಂದಿಗೆ ತುಳಿತಕ್ಕೆ ಒಳಗಾಗಿದ್ದ ಸ್ತ್ರೀಯರಿಗೆ ಮೊದಲ ಸಮಾನತೆ ನೀಡಿದರು. ಬಸವಣ್ಣನ ವಿಚಾರಧಾರೆಗಳು ಭೂಮಿ ಇರುವವರಗೂ ಶಾಶ್ವತವಾಗಿರಲಿವೆ. ಭಾವಸಾಗರದಲ್ಲಿ ಬದುಕಬೇಕು ಎಂದರೆ ಬಸವ ಎಂಬ ಮಂತ್ರವನ್ನು ದೀಕ್ಷೆಯನ್ನಾಗಿಸಿಕೊಳ್ಳಬೇಕು. ಬಸವಣ್ಣನವರ ವಚನಗಳನ್ನು ಅಭ್ಯಾಸ ಮಾಡಿದ ವ್ಯಕ್ತಿ ಎಂದಿಗೂ ಹಾದಿ ತಪ್ಪುವುದಿಲ್ಲ. ಬಸವಣ್ಣ ಅವರ ವಚನಗಳು ಬದುಕಿನ ಬೆಳಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆರ್ಶೀವಚನ ನೀಡಿ, ಬಸವೇಶ್ವರರು ಜಗತ್ತು ಕಂಡ ವಿಶೇಷ ಸಂತರು. ಜಗತ್ತಿನ ಸರ್ವಸತ್ವವನ್ನು ಸಾಮಾನ್ಯ ಜನರಿಗೂ ತಿಳಿಸಿಕೊಟ್ಟರು. ವೇದ, ಉಪನಿಷತ್‌ನಲ್ಲಿರುವ ಎಲ್ಲ ವಿಚಾರಗಳನ್ನು ಸರಳವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟವರು ಮಹಾನುಭಾವರು. ಅಧಿಕಾರವನ್ನು ನಿರ್ವಹಿಸುವ ಪರಿಯನ್ನು ಬಸವಣ್ಣ ಅವರಿಂದ ರಾಜಕೀಯ ವ್ಯಕ್ತಿಗಳು ಕಲಿಯಬೇಕಿದೆ. ಸಮಾಜದ ಮುಖ್ಯ ಸ್ಥಾನದಲ್ಲಿದ್ದ ಬಸವಣ್ಣ ಸತ್ಯಧರ್ಮದ ಹಾದಿಗೆ ಚ್ಯುತಿ ಬಂದ ಕ್ಷಣದಲ್ಲೇ ಅಧಿಕಾರದಿಂದ ಕೇಳಗಿಳಿಯುವ ಮೂಲಕ ಜಗಜ್ಯೋತಿಯಾದರು. ಬಸವಣ್ಣನವರು ಸಮಾಜದ ಎಲ್ಲ ವರ್ಗದವರಿಗೂ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದರೆ ಬದುಕು ಪಾವನವಾಗಲಿದೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮಲೆನಾಡನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆ ನಿವಾರಣೆಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಿದ್ದೇನೆ. ಅಧಿಕಾರ ಇರುವವರೆಗೂ ಎಲ್ಲ ಶಾಸಕರ ಸಹಕಾರ ಪಡೆದು ಕೆಲಸ ಮಾಡಲಿದ್ದೇನೆ. ಬಸವಣ್ಣ ಅವರು ಕೇವಲ ವೀರಶೈವ ಸಮಾಜಕ್ಕೆ ಸೀಮಿತರಲ್ಲ. ಅವರು ಹಾಕಿಕೊಟ್ಟ ತತ್ವ ಆದರ್ಶಗಳು ಎಲ್ಲ ಸಮಾಜಕ್ಕೆ ಅನ್ವಯವಾಗಲಿವೆ ಎಂದರು.
ಶಾಸಕ ಸೀಮೆಂಟ್ ಮಂಜು ಮಾತನಾಡಿ, ಸಮಸಮಾಜದ ಕನಸು ಕಂಡವರು ಬಸವಣ್ಣ. ಅವರು ಇನ್ನೂ ಕೆಲಕಾಲ ಬದುಕಿದ್ದರೆ ದೇಶದಲ್ಲಿ ಜಾತಿ ಪದ್ಧತಿ ನಾಶವಾಗುತ್ತಿತ್ತು. ಅನಾದಿ ಕಾಲದಲ್ಲೇ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಆರಂಭವಾದರೂ ಇನ್ನೂ ಕೆಲವೆಡೆ ಮೂಢನಂಬಿಕೆಗಳಂತಹ ಆಚರಣೆಗಳು ಇರುವುದು ದುರದೃಷ್ಟಕರ ಸಂಗತಿ ಎಂದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಚಾರ್ಯ ಸ್ವಾಮೀಜಿ, ತೆಂಕಲಗೋಡು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ, ಮದ್ದೂರು ಶಾಸಕ ಕದಲೂರು ಉದಯ್, ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ಮಾಜಿ ಶಾಸಕರಾದ ಬಿ.ಆರ್.ಗುರುದೇವ್, ಎಚ್.ಕೆ ಕುಮಾರಸ್ವಾಮಿ, ಎಚ್.ಎಂ.ವಿಶ್ವನಾಥ್, ಬಸವೇಶ್ವರ ಪುತ್ಥಳಿ ದಾನಿ ಬನ್ನಹಳ್ಳಿ ಪುನೀತ್, ಬೆಂಗಳೂರು ಜಿಪಂ ಅಧ್ಯಕ್ಷ ಮರಿಸ್ವಾಮಿ, ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಮಧುರ ಅಶೋಕ್‌ಕುಮಾರ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ದಿವಾನ್, ಕಾರ್ಯದರ್ಶಿ ಧರ್ಮಪ್ಪ, ಮುಖಂಡರಾದ ಮುರಳಿ ಮೋಹನ್, ವೀರಶೈವ ಸಮಾಜದ ಮುಖಂಡರಾದ ಹುರುಡಿ ಅರುಣ್, ಪ್ರಶಾಂತ್, ಶಶಿಕುಮಾರ್, ಗಗನ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವಣ್ಣನ ಪುತ್ಥಳಿ ನಿರ್ಮಾಣದ ಸ್ಥಳದವರೆಗೆ ವಿವಿಧ ಸಮಾಜದ ಸಾವಿರಾರು ಭಕ್ತರು ವಿವಿಧ ಕಲಾ-ಪ್ರಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಲೆನಾಡ ಸುಗ್ಗಿ ಕುಣಿತಕ್ಕೆ ಮಹಿಳೆಯರು, ಯುವಕರು ಕುಣಿದು ಕುಪ್ಪಳಿಸಿದರು.