

ಮುಂಡರಗಿ: ದೇಶದಲ್ಲಿ ಅಜ್ಞಾನ ಧಾರ್ಮಿಕ ಮೂಢನಂಬಿಕೆಯ ಶ್ರದ್ಧೆ ಇತ್ತು. ಮಹಿಳೆಯರು ಸ್ವತಂತ್ರವಾಗಿ ಪ್ರಶ್ನೆ ಮಾಡುವಂತಿರಲಿಲ್ಲ. ಸ್ತ್ರೀಯರನ್ನು ಕೀಳಾಗಿ ನೋಡುವ ವ್ಯವಸ್ಥೆ ಇತ್ತು. ಹೀಗಾಗಿ ಬಸವಣ್ಣನವರು ಮನೆ ಬಿಟ್ಟು ಹೊರ ಬಂದು ಹೆಣ್ಣು ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟರು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಾದಿ ಶರಣರು ಹೆಣ್ಣು ಮಕ್ಕಳಿಗಾಗಿ ಅನೇಕ ವಚನಗಳನ್ನು ಬರೆದರು. ಬಸವಣ್ಣನವರು ಇಷ್ಟಲಿಂಗವನ್ನು ಮೊದಲು ಅಕ್ಕ ನಾಗಮ್ಮ ಅವರ ಕೈಗೆ ನೀಡಿದರು. ಹೆಣ್ಣು ಮಕ್ಕಳಿಗಾಗಿ, ಕೆಳವರ್ಗದವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲು ಇಷ್ಟಲಿಂಗ ಪರಿಚಯಿಸಿದರು ಎಂದರು.
ಮನೆಯೊಳಗೆ ಗಂಡ- ಹೆಂಡತಿ ಇಬ್ಬರು ಸಮಾನರು ಎಂಬ ಭಾವ ಬರಬೇಕು. ಆಗ ಮಾತ್ರ ಮನೆತನ ಉದ್ಧಾರವಾಗುತ್ತದೆ. ಮಾನವ ಧರ್ಮದ ಅಸ್ಮಿತೆಗೆ ಗೌರವ ತಂದುಕೊಟ್ಟ ಏಕೈಕ ಧರ್ಮ ಶರಣಧರ್ಮ. ಸಮಾಜದಲ್ಲಿ ಬಸವಣ್ಣನವರು ಸಮಾನತೆಯನ್ನು ತಂದರು.
ಬಸವಣ್ಣನೆಂದರೆ ಅಜ್ಞಾನ ತೆಗೆಯುವುದು. ಜಗತ್ತಿನಲ್ಲಿ ಮೊಟ್ಟಮೊದಲಿಗೆ ಸರ್ವಜನಾಂಗದ ಶಾಂತಿಯ ತೋಟವನ್ನು ನೋಡಿದ ಮಂಟಪವೆಂದರೆ ಅದು ಅನುಭಾವ ಮಂಟಪ ಎಂದು ಹೇಳಿದರು.