

ಮೂಡಿಗೆರೆ: ವೀರಶೈವ ಲಿಂಗಾಯತ ಎಂಬುವುದನ್ನು ಒಂದು ಧರ್ಮ ಎನ್ನುವುದಕ್ಕಿಂತ ಎಲ್ಲರ ಒಳಿತು ಬಯಸುವ ಅಗಾಧ ಪರಂಪರೆ ಎಂದು ಕಾಡು ಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಂತಿನ ಮಠದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ, ಬಸವೇಶ್ವರ ಜಯಂತಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಯುಗಗಳಲ್ಲಿ ಅವತಾರ ಎತ್ತಿ ಸಾಮಾಜಿಕ ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಕೈಗೊಂಡರು. ಜಗಜ್ಯೋತಿ ಬಸವಣ್ಣನವರು ಜಗತ್ತಿಗೆ ಬೆಳಕು ನೀಡಿದರು. ತಳ ಸಮುದಾಯದ ಜನರನ್ನು ಹಾಗೂ ಅಸ್ಪಶ್ಯರನ್ನು ಅವರ ಹತ್ತಿರದಲ್ಲಿ ಇಟ್ಟುಕೊಂಡು ಪೋಷಿಸಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಪಡೆದರು ಎಂದರು.
ಹಿಂದುಳಿದವರನ್ನು ಅನುಭವ ಮಂಟಪಕ್ಕೆ ಕರೆಸಿ ಹಲವು ಉಪದೇಶಗಳನ್ನು ನೀಡಿ ಅಸ್ಪಶ್ಯರಿಂದಲೇ ವಚನಗಳನ್ನು ಬರೆಸಿ ಸಮಾಜದಲ್ಲಿ ಮೇರು ವ್ಯಕ್ತಿತ್ವ ಕಾಪಾಡಿಕೊಂಡರು. ಕಾಯಕವೇ ಕೈಲಾಸ ಎಂಬ ಕಲ್ಪನೆಯನ್ನು ಜಗತ್ತಿಗೆ ತೋರಿಸಿ ಕೊಟ್ಟವರು ಎಂದು ಬಣ್ಣಿಸಿದರು.
ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತಿ, ಮತ, ಪಂಥಗಳ ಎಲ್ಲೇ ಮೀರಿ ಸರ್ವರ ಹಿತ ಬಯಸುವ ವೀರಶೈವ ಲಿಂಗಾಯತ ಧರ್ಮ ಹಲವು ಯುಗಗಳ ಇತಿಹಾಸ ಹೊಂದಿದೆ. ತೆಲಂಗಾಣದ ಕೊಲನಪಾಕಿ ಶ್ರೀ ಸ್ವಯಂಭೂ ಸೋಮೇಶ್ವರ ಮಹಾಲಿಂಗದಿಂದ ಅವಿಭರ್ವಿಸಿ ರೇಣುಕಾಚಾರ್ಯರು ಭೂ ಸ್ಪರ್ಶ ಮಾಡಿದ ಶುಭ ದಿನವನ್ನು ಶ್ರೀ ರೇಣುಕಾ ಜಯಂತಿಯಾಗಿ ಆಚರಿಸಲಾಗುತ್ತಿದೆ. ಬಸವಣ್ಣರನ್ನು ಪೂಜೆಗೆ ಸೀಮಿತಗೊಳಿಸದೆ ಅವರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಾಗ ಮಾತ್ರ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.