

ಸಿಂಧನೂರು: ಜಗಜ್ಯೋತಿ ಬಸವೇಶ್ವರ ಅವರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಬದುಕಿಗೆ ಪೂರಕವಾಗಿವೆ ಎಂದು ರಾಜ್ಯ ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್ ಹೇಳಿದರು.
ನಗರದ ಆರ್‌ಜಿಎಂ ಶಾಲೆ ಮೈದಾನದಲ್ಲಿ ಬಸವ ಜಯಂತಿ ಉತ್ಸವ ಸಮಿತಿ, ಬಸವಕೇಂದ್ರ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪದಲ್ಲಿ ಶುಕ್ರವಾರ ಮಾತನಾಡಿದರು. ವಚನ ಸಾಹಿತ್ಯದ ಮೂಲಕ 12ನೇ ಶತಮಾನದಲ್ಲಿ ಮೇಲು-ಕೀಳು ಎನ್ನುವ ಭೇದ ದೂರವಾಗಿಸುವ ಕೆಲಸ ನಡೆಯಿತು ಎಂದರು.
ಜನರನ್ನು ಅಕ್ಷರಸ್ಥರನ್ನಾಗಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ. ಕುಲಕಸುಬಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದರೊಂದಿಗೆ ನಾವೆಲ್ಲರೂ ಒಂದೇ, ಮಾನವ ಕುಲವೊಂದೇ ಎಂದು ಬಸವಣ್ಣ ಸಾರಿದ್ದಾರೆ ಡಾ.ಬಿ.ಎನ್.ಪಾಟೀಲ್ ತಿಳಿಸಿದರು.
ಉಪನ್ಯಾಸಕಿ ಶೋಭಾ ತೋರಗಲ್ ಮಾತನಾಡಿ, ಶೋಷಿತ ಜನರನ್ನು ಮೇಲಕ್ಕೆತ್ತಿ ಸಮ ಸಮಾಜ ಸ್ಥಾಪಿಸಲು ಸಣ್ಣ ಜಾತಿಗಳಿಗೆ ಪ್ರಾತಿನಿಧ್ಯ ನೀಡಿ ಗೌರವಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ. ಮೌಢ್ಯ, ಕಂದಾಚಾರ, ಸ್ತ್ರೀ ಶೋಷಣೆ ವಿರುದ್ಧ ಕ್ರಾಂತಿ ಮಾಡಿದರು ಎಂದರು.
ವಿಜಯಪುರ ಜಿಲ್ಲೆ ತಿಕೋಟಾ ಸುವರ್ಣಗಿರಿ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕೇಂದ್ರ ಜಿಲ್ಲಾ ಅಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಎ.ಪಿ.ವೆಂಕಟರಡ್ಡಿ ಅಗಸನೂರು, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಬಸವಕೇಂದ್ರದ ಅಧ್ಯಕ್ಷ ಕೆರೇಗೌಡ ಪೊ.ಪಾ., ಮಾಜಿ ಅಧ್ಯಕ್ಷ ಗುಂಡಪ್ಪ ಬಳಿಗಾರ, ಯುವ ಘಟಕದ ಅಧ್ಯಕ್ಷ ನಿಜಗುಣ ಹಡಪದ, ನಿರುಪಾದೆಪ್ಪ ಗುಡಿಹಾಳ, ಮಲ್ಲನಗೌಡ ಕಾನಿಹಾಳ ಇದ್ದರು.