

ಸಿರವಾರ: ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಸಮಾನತೆಯ ಹಣತೆಯನ್ನು ಬೆಳಗಿಸಿದ್ದರು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ಪಟ್ಟಣದಲ್ಲಿ ಚುಕ್ಕಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಉಮಾಪತಿ ಚುಕ್ಕಿ ಅವರ 47ನೇ ಪುಣ್ಯ ಸ್ಮರಣೋತ್ಸವ ಹಾಗೂ ಬಸವ ತತ್ವ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು. ಎಲ್ಲರಿಗೂ ಸಮಬಾಳ್ವೆ ದೊರೆಯಲಿ ಎನ್ನುವುದು ಆಶಯ ಬಸವಣ್ಣ ಅವರದಾಗಿತ್ತು. ಬಸವಣ್ಣ ಅವರ ದೃಷ್ಟಿಕೋನದಲ್ಲಿ ಧರ್ಮ ಎಂಬುದು ಒಂದು ಬದುಕು. ಲಿಂಗ ಒಂದೇ ಜಾತಿಗೆ ಸೀಮಿತವಾಗಿಲ್ಲ. ಸಕಲ ಧರ್ಮ, ಜಾತಿ, ಜನಾಂಗ ಪೂಜಿಸಬಹುದು ಎಂದು ನಿರೂಪಿಸಿದರು. ಪ್ರಸ್ತುತ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಘರ್ಷಣೆಗಳು ನಡೆಯುತ್ತಿವೆ. ಸರ್ವರನ್ನು ಸಮಾನತೆಯ ದೃಷ್ಟಿಕೋನದಲ್ಲಿ ಕಾಣಬೇಕು. ಬಸವ ತತ್ವ ಮೂಲಕ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ್, ಉಪನ್ಯಾಸಕಿ ಡಾ.ರಾಜೇಶ್ವರಿ ವಿರಕ್ತಮಠ, ಇತರರಿದ್ದರು.