

ವಿಜಯಪುರ: ತಮ್ಮತನವನ್ನು ತ್ಯಾಗ ಮಾಡುವ ಮೂಲಕ ಉತ್ತಮ ಸಾಮಾಜಿಕ ವ್ಯವಸ್ಥೆಗೆ ಕಾರಣರಾದವರು ಜಗಜ್ಯೋತಿ ಬಸವೇಶ್ವರರು ಎಂದು ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ ಹೇಳಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ವಿಜಯಪುರ ಡಿಎಸ್ಪಿ ಬಸವರಾಜ ಯಲಿಗಾರ ಅವರು ಬಸವಣ್ಣನವರ ವಚನಗಳನ್ನು ಅನುವಾದಿಸಿದ 'ನನ್ನೊಳಗಿನ ನಾನು ನೀನೇ. ಮೈ ಮಿ ಈಸ್ ದಿ' ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವಿಸಿದ್ದನ್ನು ಸದ್ಯ ನಾವು ಅನುಭವಿಸುತ್ತಿದ್ದೇವೆ. ಬಸವಣ್ಣ ನಮಗೆ ಸಾರ್ವಕಾಲಿಕ ಪ್ರಸ್ತುತ. ಶ್ರೇಷ್ಠತೆ ಕಾರಣದಿಂದಾಗಿ ಕಾರ್ಯ ಗುರುತಿಸಲ್ಪಡುತ್ತದೆ ಮತ್ತು ಅನುಕರಣೀಯವಾಗುತ್ತದೆ. ನಾವು ಮಾಡುವ ಕಾರ್ಯದಲ್ಲಿ ಶ್ರೇಷ್ಠತೆ ಇರಬೇಕು ಎಂದರು.
ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಕಾರ್ಯಕ್ರಮ ಉದ್ಘಾಟಿಸಿ, ಬಸವಣ್ಣ ತಾನೊಬ್ಬನೇ ಗೆದ್ದು ನಿಲ್ಲಲಿಲ್ಲ. ಸಮಾಜದಲ್ಲಿದ್ದ ಎಲ್ಲರನ್ನು ಒಟ್ಟಿಗೆ ಎದ್ದು ನಿಲ್ಲಿಸಿದ. ಅವರ ವಿಚಾರಗಳು ದೇಶ ವಿದೇಶಗಳಿಗೆ ಪಸರಿಸಬೇಕು. ಬಸವ ಸಮಿತಿ ಆ ಕಾರ್ಯವನ್ನು ಬಹಳ ಶಿಸ್ತಿನಿಂದ ಮಾಡುತ್ತಿದೆ ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯ, ನಿವೃತ್ತ ಡಿಜಿಪಿ ಶಂಕರ ಬಿದರಿ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆ ಸಾಂಸತಿಕ ಹಿನ್ನಲೆ ಹೊಂದಿದ ಜಿಲ್ಲೆ. ಬಸವಣ್ಣ, ಸಿದ್ಧೇಶ್ವರ ಮಹಾಸ್ವಾಮೀಜಿ ಸೇರಿ ಹಲವು ಸಂತ ಮಹಾಂತರನ್ನು ಜಗತ್ತಿಗೆ ನೀಡಿದ ಜಿಲ್ಲೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಣ್ಣ ಹುದ್ದೆಯಲ್ಲಿದ್ದರೂ ಬಸವರಾಜ ಯಲಿಗಾರ ಈ ಕಾರ್ಯಕ್ಕಾಗಿ ಈ ಇಲಾಖೆಯಲ್ಲಿಯೇ ದೊಡ್ಡವರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಟ್ರೆಲಿಯಾ ನಿವಾಸಿ ವೀರೇಶ ಹಿರೇಮಠ ಮಾತನಾಡಿ, ಇಂಗ್ಲಿಷ್ ಅನುವಾದಿತ ವಚನಗಳನ್ನು ರಾಗ ಸಂಯೋಜನೆಗೊಳಿಸಿ ವಿದೇಶಗಳಲ್ಲಿ ಪ್ರಸಿದ್ಧಿಗೆ ತರುವ ಕಾರ್ಯಕ್ಕೆ ನಾವು ಮುಂದಾಗಿದ್ದೇವೆ. ಈಗಾಗಲೇ ಆಸ್ಟ್ರೆಲಿಯಾ ಬಸವ ಸಮಿತಿ ಇಂಗ್ಲಿಷ್ ಅನುವಾದಿತ ವಚನಗಳ ರಾಗ ಸಂಯೋಜನೆಯಲ್ಲಿ ತೊಡಗಿದೆ ಎಂದರು.
ಅನುವಾದಕಾರ, ಡಿಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ನನ್ನ ತಂದೆ ತಾಯಿ ಪ್ರೇರಣೆಯಿಂದಲೇ ನಾನು ಈ ಕೃತಿ ರಚಿಸಿದ್ದೇನೆ. ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ, ನನ್ನ ಆತ್ಮತೃಪ್ತಿಗಾಗಿ ಈ ಕೃತಿ ರಚಿಸಿರುವೆ. ಮುಂದಿನ ದಿನಗಳಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನವರ ವಚನಗಳನ್ನು ಅನುವಾದ ಮಾಡುವ ಯೋಚನೆಯಲ್ಲಿದ್ದೇನೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಅಧ್ಯಾತ್ಮ ಚಿಂತಕ ಜಂಬುನಾಥ ಮಳಿಮಠ ಮತ್ತು ಫ್ಲೋರಿಡಾ ವಿವಿ ಧರ್ಮಶಾಸ ವಿಭಾಗದ ಪ್ರೊ. ಬೆನ್ ಗಿಲ್ ಮಾತನಾಡಿದರು.
ಸಾಹಿತಿ ರಾಗಂ ಕೃತಿ ಪರಿಚಯಿಸಿದರು. ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆ, ಡಾ. ಫ.ಗು. ಹಳಕಟ್ಟಿ ಅವರ ಕೊಡುಗೆ ಸ್ಮರಿಸಿದರು.
ಶರಣು ಸಬರದ ಸ್ವಾಗತಿಸಿದರು. ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ಡಿಸಿಪಿ ಸಂಜೀವ ಪಾಟೀಲ, ಹಿರಿಯ ಅಧಿಕಾರಿ ಶಿವಾನಂದ ಕಲಕೇರಿ, ಕಿರಣ ಬೆಟಗೇರಿ, ಶಂಕರಗೌಡ ಹೊಸಮನಿ, ಅನಿಲ ಪಾಟೀಲ ಮತ್ತಿತರರಿದ್ದರು.