ಪ್ರಜಾಪ್ರಭುತ್ವ ವ್ಯವಸ್ಥೆ ತಂದವರು ಬಸವಣ್ಣ

ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಬಸವ ಜಯಂತಿ ನಿಮಿತ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಲಾಯಿತು.
ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಬಸವ ಜಯಂತಿ ನಿಮಿತ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಲಾಯಿತು.
Published on

ಯಳಂದೂರು: ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿದ ಪುಣ್ಯ ಪುರುಷರಾಗಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಜೆಇ ನಾಗೇಂದ್ರ ತಿಳಿಸಿದರು.


ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣ ಜಾತಿ, ಧರ್ಮ, ಮತಭೇದವನ್ನು ಮರೆತು ಮನುಷ್ಯ ಜಾತಿಯನ್ನು ಒಗ್ಗೂಡಿಸಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು. ವಿಶ್ವದಲ್ಲಿ 800 ವರ್ಷಗಳ ಹಿಂದೆಯೇ ಶೋಷಿತರ, ಮಹಿಳೆಯರ, ಜಾತಿ, ವರ್ಣಭೇದ ವಿರುದ್ಧ ಧ್ವನಿ ಎತ್ತಿ ಅದರ ಹೋರಾಟ ಮಾಡಿದ್ದರು. ಅನುಭವ ಮಂಟಪ ಎಂಬ ಸಂಸತ್ ರಚನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಬಸವಣ್ಣ ಇಂದಿಗೂ ಪ್ರಸ್ತುತರಾಗುತ್ತಾರೆ. ಇವರ ಚಿಂತನೆಗಳೇ ಕ್ರಾಂತಿಕಾರಿಯಾಗಿತ್ತು. ಇಡೀ ಸಮಾಜವನ್ನು ಸಮ ಸಮಾಜ ಮಾಡುವತ್ತ ಇದ್ದ ಇವರ ಕಾಳಜಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರೊಂದಿಗೆ ಕಾಯಕ ತತ್ವ ಸಾರಿದ ಇವರು ಒಂದು ಉತ್ತಮ ಸಮಾಜ ಸೃಷ್ಟಿಯ ಸಂಕೇತವಾಗಿದ್ದರು. ಇಂತಹ ವ್ಯಕ್ತಿ ನಮ್ಮ ರಾಜ್ಯದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯವಾಗಿದ್ದು ಇವರ ತತ್ವಾದರ್ಶಗಳ ಅನುಕರಣೆ ನಮಗೆ ಪ್ರಸ್ತುತವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಬಸವಣ್ಣ, ಲಕ್ಷ್ಮೀ, ರೇಖಾ, ವಿಜಯ, ಜಯಲಕ್ಷ್ಮೀ, ಪರಶಿವಮೂರ್ತಿ, ಮಲ್ಲಿಕಾರ್ಜುನ, ರಘು, ಜಗದೀಶ್, ಗಣೇಶ್ ಸೇರಿದಂತೆ ಅನೇಕರು ಇದ್ದರು.

ವಿವಿಧೆಡೆ ಅದ್ದೂರಿ ಬಸವ ಜಯಂತಿ ಆಚರಣೆ: ತಾಲೂಕಿನಾದ್ಯಂತ ಶುಕ್ರವಾರ ವಿವಿಧೆಡೆ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪಟ್ಟಣದ ಎಸ್‌ಬಿಐ ಸರ್ಕಲ್, ತಾಲೂಕಿನ ಗೌಡಹಳ್ಳಿ, ಹೊನ್ನೂರು, ಕೆಸ್ತೂರು, ಅಂಬಳೆ ಸೇರಿದಂತೆ ವಿವಿಧೆಡೆ ಬಸವೇಶ್ವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ಮಜ್ಜಿಗೆ, ಪಾನಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net