

ಮೈಸೂರು: ಬಸವಣ್ಣನವರ ಸೀಮೋಲ್ಲಂಘನ ಆಂದೋಲನವಾದ ಕೂಡಲ ಸಂಗಮ ಸಂಸ್ಕೃತಿಯನ್ನು ವರ್ತಮಾನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ಪ್ರಸಾರಾಂಗ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ಶರಣರ ಅಂತಃಕರಣ ಹಾಗೂ ಜೀವಪರ ಮಾನವೀಯ ಮೌಲ್ಯಗಳನ್ನು ಹೂಂದಿದವರು. ಹಾಗೆಯೇ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಕುವೆಂಪು ಇವರೆಲ್ಲರೂ ಒಂದೇ ಚೇತನದ ಐದು ಮುಖಗಳು ಎಂದು ವಿಶ್ಲೇಷಿಸಿದರು.
ಶರಣರ ಪರಿಕಲ್ಪನೆಯಲ್ಲಿ ಗುರು, ಲಿಂಗ, ಜಂಗಮ ಅಂಶಗಳನ್ನು ಕಾಣಬಹುದು. ಅಲ್ಲದೆ ಬಸವಣ್ಣನವರು ಮಾನವೀಯ ನೆಲೆಯಲ್ಲಿ ಧಾರ್ಮಿಕ ಸಂಸ್ಕೃತಿ ನೆಲೆಗಟ್ಟಿನಲ್ಲಿ ಅರಳಿದ ಜೀವ. ಅವರ ಆಂದೋಲನ ಸೀಮೋಲ್ಲಂಘನ ಆಂದೋಲನವಾಗಿದ್ದು, ಕೂಡಲ ಸಂಗಮದ ಸಂಸ್ಕೃತಿಯಾಗಿತ್ತು. ಅಂತಹ ಸಂಸ್ಕೃತಿಯನ್ನು ವರ್ತಮಾನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಬದುಕಿನ ಹೊರೆಕೋರೆಗಳಿಗೆ ಉತ್ತರ ಕಂಡಕೊಂಡು, ಉಪನಯನ ಧಾರ್ಮಿಕ ಸಂಸ್ಕೃತಿಯನ್ನು ಧಿಕ್ಕರಿಸಿ ಕೂಡಲ ಸಂಗಮಕ್ಕೆ ನಡೆದ ಪರಿಪಾಲಕ ನಮ್ಮ ಬಸವಣ್ಣ. ಶರಣರು ತಮ್ಮನ್ನು ಪ್ರಶ್ನಿಸಿ ತಿದ್ದಿಕೊಂಡವರು. ಹಾಗೆಯೆ ಸಕಲ ಜೀವಾತ್ಮರ ಲೇಸನ್ನು ಬಯಸಿದವರು ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಶಂಕರ ದೇವನೂರು ಮಾತನಾಡಿ, ಈ ನೆಲದ ಜಲವ ಕುಡಿದು ಮಾನವೀಯ ಬದುಕಿಗೆ ಮೆರುಗು ನೀಡಿದ ಶರಣ ಸಂಸ್ಕೃತಿ ನಮ್ಮದು. 12ನೇ ಶತಮಾನದ ಶರಣ ಚಿಂತನೆ ಮಾನವೀಯ ಮೌಲ್ಯದ ಜೀವಕೇಂದ್ರವಾಗಿತ್ತು. ಇಂದು ವಿಜ್ಞಾನ ಎಷ್ಟೇ ಮುಂದೆ ಹೋದರು ನಾವು ನೈತಿಕವಾಗಿ ಹಿಂದೆ ಉಳಿದಿದ್ದೇವೆ ಎಂಬುದನ್ನು ಮನಗಾಣಬೇಕು ಎಂದರು.
12ನೇ ಶತಮಾನದಲ್ಲಿ ಶರಣರು ಒಳಗೊಳ್ಳುವ ಸಂಘವಿತ್ತು. ಆದರೆ ಇಂದು ಹೊರಗಿಡುವ ಸಂಘಗಳು ಹುಟ್ಟಿಕೊಂಡಿವೆ. ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲೂ ಹುಟ್ಟಿದ್ದೇವೆ ಎನ್ನುವ ಬಸವ ಚಿಂತನೆ ಮೂಡಬೇಕು ಎಂದರು
ಸ್ವರ್ಗ, ನರಕಗಳ ಮೌಢ್ಯತೆಯ ಅಲೋಚನೆಯನ್ನು ಕಿತ್ತು ಹಾಕಿ ಸನ್ಮಾರ್ಗದ ಕಡೆ ಸಾಗಿ ಎಂದು ಹೇಳಿದವರು ನಮ್ಮ ಶರಣರು. ಶ್ರೇಷ್ಠ, ಕನಿಷ್ಠ ಎನ್ನುವ ಕೆಟ್ಟ ಚಿಂತನೆಯೇ ನಿಜವಾದ ಸಾವು. ಇವುಗಳಿಂದ ಮನುಷ್ಯ ಹೊರಬಂದಾಗ ಮಾತ್ರ ಮನುಷ್ಯ ಜೀವಂತ ಎಂದು ಅಭಿಪ್ರಾಯ ಹಂಚಿಕೊಂಡರು.
ಮೈಸೂರು ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಕೆ. ಎಸ್. ರೇಖಾ ಮಾತನಾಡಿ, ವಚನ ಸಾಹಿತ್ಯ ಪ್ರಪಂಚದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ಇದು ನಮ್ಮ ಹೆಮ್ಮೆಯ ಸಂಗತಿ. ಮೇಲು, ಕೀಳು, ಗಂಡು, ಹೆಣ್ಣು ಎನ್ನುವ ತಾರತಮ್ಯವನ್ನು ಕಿತ್ತು ಎಸೆದು ಎಲ್ಲರನ್ನೂ ಅಪ್ಪಿಕೊಂಡವರು ಬಸವಣ್ಣ ಎಂದರು.
ವಿದ್ಯೆ ಕಲಿಯುವುದರಿಂದ ಒಂದು ಕಾಲದವರೆಗೆ ತಳ ಸಮುದಾಯದ ಜನರನ್ನು ದೂರ ಇಟ್ಟಿದ್ದರು. ಆದರೆ ಈಗ ವಿದ್ಯೆಯೇ ಆಸ್ತಿ ಎನ್ನುವ ಹಂತಕ್ಕೆ ಬಂದಿದ್ದೇವೆ ಎಂದು ಹೇಳಿದರು
ಪ್ರಸಾರಾಂಗದ ನಿರ್ದೇಶಕ ಪ್ರೊ. ಎಂ.ನಂಜಯ್ಯ ಹೊಂಗನೂರು ಮಾತನಾಡಿ, ನಮ್ಮ ನಡುವಿನ ವಚನ ಚಳವಳಿಯನ್ನು ಶಿವ ಸಂಸ್ಕೃತಿಯ ಚಳುವಳಿ ಎಂದು ಕರೆಯಬಹುದು. 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ, ಆ ಕಾಲದ ಒಂದು ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿತ್ತು. ಇಂದಿನ ಸಂಸತ್ತಿಗೆ ಪೂರಕವಾಗಿದೆ ಎಂದು ಹೇಳಿದರು. ಸಹಾಯಕ ನಿರ್ದೇಶಕ ಅನುಕುಮಾರ್, ಅಧೀಕ್ಷಕ ಚನ್ನಬಸಪ್ಪ, ಹಿರಿಯ ಸಹಾಯಕ ನಟೇಶ್ ಇತರರಿದ್ದರು.