ವಿವೇಕ್ ಬ್ರಿಗೇಡ್‌ನಿಂದ ಜಾಗೃತಿ ಅಭಿಯಾನ

BBGD 23-1
Published on

ಬಸವನಬಾಗೇವಾಡಿ: ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಕರೊನಾ ವೈರಸ್‌ನಿಂದ ಪಾರಾಗುವ ನಿಟ್ಟಿನಲ್ಲಿ ಅನುಸರಿಸುವ ಕ್ರಮಗಳ ಕುರಿತು ಕರಪತ್ರ ಹಾಗೂ ಜನತೆಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿವೇಕ ಬ್ರಿಗೇಡ್ ಕಾರ್ಯಕರ್ತರು ಸೋಮವಾರ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ವಿತರಿಸಿದರು.
ವಿವೇಕ್ ಬ್ರಿಗೇಡ್ ಮುಖಂಡ ವಿನೂತ ಕಲ್ಲೂರ ಮಾತನಾಡಿ, ಚೀನಾದಲ್ಲಿ ಸೃಷ್ಟಿಯಾದ ಕರೊನಾ ಸೋಂಕು ಜಗತ್ತಿನ ವಿವಿಧ ದೇಶಗಳಲ್ಲಿ ವ್ಯಾಪಿಸಿದ್ದು, ಹಲವು ದೇಶಗಳು ತಲ್ಲಣಗೊಂಡಿವೆ. ಆದರೆ, ಭಾರತೀಯರಲ್ಲಿ ರೋಗ ನಿರೋಧಶಕ್ತಿ ಹೊಂದಿದ್ದರೂ ಮುಂಜಾಗ್ರತೆ ಕ್ರಮ ಪಾಲಿಸುವ ಜತೆಗೆ ವೈರಸ್ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಹಾಗೂ ಸ್ವಚ್ಛವಾಗಿಡುವ ಮೂಲಕ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಡಿವೈಎಸ್‌ಪಿ ಈ. ಶಾಂತವೀರ ಮಾತನಾಡಿ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಪೊಲೀಸ್ ಇಲಾಖೆ, ಪುರಸಭೆ, ತಾಲೂಕು ಆಡಳಿತ ಜಂಟಿಯಾಗಿ ಮಾರಕ ಕರೊನಾ ವೈರಸ್ ತಾಲೂಕಿನಲ್ಲಿ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯವಾಗಿದೆ. ಜನರು ಒಂದೆಡೆ ಸೇರದೆ ಮನೆಯಲ್ಲಿ ಇರಬೇಕು. ಅನಿವಾರ್ಯ ಪರಿಸ್ಥಿತಿ ಇದ್ದಾಗ ಮುಂಜಾಗ್ರತೆ ಪಾಲಿಸಿಕೊಂಡು ಹೊರಬಂದು ವಾಪಸ್ ಮರಳಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಿದಾಗ ವೈರಸ್ ದಾಳಿ ಮಾಡಲು ಸಾಧ್ಯವಿಲ್ಲ ಎಂದರು.
ಅಭಿಯಾನದಲ್ಲಿ ದಾದಾಗೌಡ ಬಿರಾದಾರ, ರವಿಗೌಡ ಚಿಕ್ಕೊಂಡ, ಶಿವು ತೊಳನೂರ, ಕಾಶಿನಾಥ ಅವಟಿ, ಸಚಿನ್ ಕಲ್ಲೂರ, ಈರಣ್ಣ ಕಮ್ಮಾರ, ಪೃಥ್ವ್ವಿರಾಜ ನಾಯ್ಕೋಡಿ, ಸಂದೀಪ ಹಳ್ಳೂರ, ಜಗದೀಶ ಮಠ, ಪ್ರಭಾಕರ ಖೇಡದ, ಹನುಮಂತ ಮಾಲಗಾರ, ರಾಹುತ ಹಂಜಗಿ, ಸುರೇಶ ಹೂಗಾರ, ಮಲ್ಲು ಬನಾಸಿ, ತುಕಾರಾಮ ನಾಯಕ, ಮಹೇಂದ್ರ ಕುಮಾವತ್, ಸಂಗಮೇಶ ಹುಜರತಿ, ಸಂಗಮೇಶ ಕಲ್ಲೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net