ಹೆಸ್ಕಾಂ ಖಾಸಗೀಕರಣ ಚಿಂತನೆ ವಿರೋಧಿಸಿ ಪ್ರತಿಭಟನೆ

BBGD 1-1
Published on

ಬಸವನಬಾಗೇವಾಡಿ: ಕೆಪಿಟಿಸಿಎಲ್, ಹೆಸ್ಕಾಂ, ಬೆಸ್ಕಾಂ ಸೇರಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈತ- ಜನ ಹಾಗೂ ನೌಕರರ ವಿರೋಧಿಯಾಗಿದೆ ಎಂದು ಆರೋಪಿಸಿ ಪಟ್ಟಣದ ಹೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೆಸ್ಕಾಂ ನೌಕರರು ಕಪ್ಪು ಪಟ್ಟಿ ಕಟ್ಟಿಕೊಂಡು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಜಾಧವ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಕಂಪನಿಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿದಲ್ಲಿ ಹೊಸ ನೀತಿಗಳ ಪ್ರಕಾರ ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಪಡೆಯಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಣ ಸಮಿತಿ ರಚನೆಯಾಗಿ ಜನಸಾಮಾನ್ಯರು ಸ್ಪಂದಿಸುವುದು ಕಷ್ಟಸಾಧ್ಯವಾಗುತ್ತದೆ. ಈಗಾಗಲೇ ನೌಕರರು ಖಾಸಗಿ ಕಂಪನಿಗಿಂತ ಕಡಿಮೆ ಕೆಲಸ ಮಾಡುತ್ತಿಲ್ಲ, ದಿನದ 24 ಗಂಟೆ ಗ್ರಾಹಕರಿಗೆ ಸೇವೆ ನೀಡಲು ಶ್ರಮಿಸುತ್ತಿದ್ದು ವಿದ್ಯುತ್ ಕಂಪನಿಗಳ ಖಾಸಗೀಕರಣ ಮಾಡುವುದು ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.
ರೈತರಿಗೆ ಹಾಗೂ ವಿವಿಧ ಯೋಜನೆಗಳಡಿ ಬಡ ಕುಟುಂಬಗಳಿಗೆ ಇಲಾಖೆ ನಿಗಧಿಪಡಿಸಿದ ಯುನಿಟ್ ಉಚಿತವಾಗಿ ನೀಡುತ್ತಿದ್ದು, ಹೊಸ ನೀತಿಯಿಂದ ರೈತರಿಗೆ-ಜನತೆಗೆ ತೊಂದರೆಯಾಗುತ್ತದೆ. ರೈತರು ಸೇರಿ ಗ್ರಾಹಕರಿಗೆ ಸೇವೆ ಪಡೆಯುವ ಹಕ್ಕು ಮೊಟಕುಗೊಂಡು ಕಂಪನಿ ಖಾಸಗಿ ವ್ಯಕ್ತಿಯ ಕೈಯಲ್ಲಿ ಸಿಕ್ಕಾಗ ಖಾಸಗಿ ವ್ಯಕ್ತಿಯ ಹಕ್ಕು ಪ್ರಾಧ್ಯಾನ್ಯತೆ ಪಡೆದುಕೊಳ್ಳುತ್ತದೆ. ಹಗಲು-ರಾತ್ರಿ ಎನ್ನದೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ನೌಕರರ ಸಂಖ್ಯೆಗೂ ಕತ್ತರಿ ಬೀಳುವ ಸಾಧ್ಯತೆವಿದ್ದು, ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀಳುತ್ತದೆ, ಕೂಡಲೇ ಕೇಂದ್ರ ಸರ್ಕಾರವು ಖಾಸಗೀಕರಣ ನೀತಿ ಕೈಬಿಡಬೇಕೆಂದು ಆಗ್ರಹಿಸಿದರು.
ನೌಕರರ ಸಂಘದ ಅಧ್ಯಕ್ಷ ಸುರೇಶ ಕಲ್ಲೂರ, ಎಚ್.ಬಿ. ಉಳ್ಳಾಗಡ್ಡಿ, ವಿ.ಎಚ್. ಬಿರಾದಾರ, ಲಕ್ಷ್ಮೀ ಹಿಟ್ನಳ್ಳಿ, ಮಂಜು ಇಳಗೇರ, ವಿರೇಶ ಸರಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಖಂಡಿಸಿ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಎಂ.ಎಸ್. ತಳವಾರ, ಬಿ.ಎಂ. ಬೆಣ್ಣೂರ, ಆರ್.ಎ. ಮಲಘಾಣ, ಚಂದ್ರು ಬೂದಿಹಾಳ, ಸುಭಾಷ ನಾಶಿ, ಎಸ್.ಎಂ. ಕೆಂಗನಾಳ, ಪ್ರವೀಣ ನರಗುಂದ, ಎಸ್.ಎಸ್. ಕ್ವಾಟಿ, ಮಹಾದೇವಿ ನಾಗೋಡ, ಪಾರ್ವತಿ ಗಾಣಿಗೇರ, ಯಲ್ಲಮ್ಮ ಕಮತರ, ಸುಧಾ ಪತ್ತಾರ, ಶಿಲ್ಪಾ ಪೂಜಾರಿ, ಸವಿತಾ ಮಾಡ್ಯಾಳ, ರೇಣುಕಾ ಚವಾಣ್ ಸೇರಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net