

ಬಸವನಬಾಗೇವಾಡಿ: ಶಿಕ್ಷಕರ ಸಮೂಹದಲ್ಲಿ ಹಲವು ಗುಂಪುಗಳಿದ್ದು, ಅದನ್ನು ಬದಿಗೊತ್ತಿ ಎಲ್ಲರೂ ಒಂದೇ ಮನೋಭಾವದಿಂದ ಸೇವೆ ಸಲ್ಲಿಸಿ ಸರ್ಕಾರಿ ಶಾಲೆಗಳ ಕಾರ್ಯವೈಖರಿಗೆ ಜನಮೆಚ್ಚುಗೆ ಪಡೆದಾಗ ಸೇವೆ ಸಾರ್ಥಕವಾಗುತ್ತದೆ ಎಂದು ಬಿಇಒ ಬಸವರಾಜ ತಳವಾರ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಬೋಧಿಸುವುದಿಲ್ಲ. ಶಿಕ್ಷಕರೂ ಶಾಲೆಗಳಿಗೆ ಸರಿಯಾಗಿ ಬರುವುದಿಲ್ಲ ಎಂದು ಜನರಿಂದ ಅಪಸ್ವರಗಳು ಕೇಳಿಬರುತ್ತಿರುವ ಹಿನ್ನೆಲೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಬೇಕು. ಶಿಕ್ಷಕರ ಗುಂಪುಗಳು ಈ ಕುರಿತಾಗಿ ಸಕಾರಾತ್ಮಕವಾಗಿ ಆಲೋಚಿಸಿ ಪರಿವರ್ತನೆಗೆ ನಾಂದಿ ಹಾಡಬೇಕು ಎಂದರು.
ತಾಲೂಕಿನಲ್ಲಿ 14,028 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರ ಸೇವಾ ಮಾಹಿತಿ ಮತ್ತು ಸಮಸ್ಯೆಗಳ ಕುರಿತಾಗಿ ಅರಿತುಕೊಳ್ಳಲು ಗುರು ಸ್ಪಂದನ ಕಾರ್ಯಕ್ರಮ ಉಪಯುಕ್ತವಾಗಿದೆ. ವರ್ಗಾವಣೆ ಇಲ್ಲವೆ ಬಡ್ತಿ ಸೇರಿ ಒಟ್ಟಾರೆ ಸೇವಾ ಪುಸ್ತಕದಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು. ಜನಗಣತಿ, ಬೇಸಿಗೆ ಸಂಭ್ರಮದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರ ಸೇವೆ ಸರಿಪಡಿಸಲಾಗುವುದು. ಶಿಕ್ಷಕರ ಸಮಸ್ಯೆ ಕುರಿತಾಗಿ ಗಮನಕ್ಕೆ ತಂದಲ್ಲಿ ಸ್ಪಂದಿಸಲು ತಾವೂ ಸಿದ್ಧ್ದರಿದ್ದು ಇಲಾಖೆಯಲ್ಲಿ ಮೇಲುಕೀಳು ಎಂಬ ಮನೋಭಾವ ಬೇಡ. ಶಿಕ್ಷಕರ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದರು.
ಶಿಕ್ಷಕರ ಸಂಘಟನೆ ಮುಖಂಡ ಎಸ್.ಜಿ. ಪಾಟೀಲ ಮಾತನಾಡಿ, ಈ ಹಿಂದೆ ಶಿಕ್ಷಕರ ಸಂಬಳ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಈಗ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಸಂಬಳ ಸಿಗುವಂತಾಗಿದೆ. ಬಹಳಷ್ಟು ಶಿಕ್ಷಕರ ಸೇವಾ ಪುಸ್ತಕದಲ್ಲಿ ಹಲವು ನ್ಯೂನ್ಯತೆಗಳಿದ್ದವು. ನಾಲ್ಕೈದು ವರ್ಷದ ವೈದ್ಯಕೀಯ ಭತ್ಯೆ ಬಾಕಿ ಉಳಿದಿತ್ತು. ಬಿಇಒ ತಳವಾರ ಅವರು ಶಿಕ್ಷಕರ ಸಮಸ್ಯೆಗಳನ್ನು ಅರಿತು, ಸಮಸ್ಯೆ ಇತ್ಯರ್ಥ ಪಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು. ರಾಠೋಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮಂಗಾನವರ, ಎಂ.ಬಿ. ತೋಟದ, ಎಸ್.ಬಿ. ಪಾಟೀಲ, ಹೊನ್ನಪ್ಪ ಗೊಳಸಂಗಿ, ಜಿ.ಎಸ್. ಗಣಿ, ಸಿ.ಟಿ. ಮಾದರ, ಆರ್.ಆರ್. ಕನ್ನೂರ, ಆರ್.ಆರ್. ಚವಾಣ್, ಎಸ್.ಬಿ. ಲಿಂಗರಡ್ಡಿ, ಈರಣ್ಣ ಜುಳಜುಳೆ, ಸಿದ್ದಣ್ಣ ಉಕ್ಕಲಿ, ಐ.ಎಂ. ಇಂಡಿ ಮತ್ತಿತರರಿದ್ದರು.
ಶಿಕ್ಷಕ ಎಚ್.ಬಿ. ಬಾರಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತು ಅಗ್ನಿ ಸ್ವಾಗತಿಸಿದರು. ಶರಣಪ್ಪ ಮಾದರ ವಂದಿಸಿದರು.