

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ಶಿ.ಶಿ. ಬಸವನಾಳ ಕನ್ನಡದ ಬಹುದೊಡ್ಡ ವಿದ್ವಾಂಸರು. ಶಿಕ್ಷಣ, ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಗೆ ಸಲ್ಲಿಸಿದ ಕೊಡುಗೆ ಸ್ಮರಣೀಯ ಎಂದು ಹಿರಿಯ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ, ಕೆಎಲ್ಇ ಸಂಸ್ಥೆಯ ಶ್ರೀಮತಿ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ವತಿಯಿಂದ ಹುಬ್ಬಳ್ಳಿ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೊ.ಶಿ. ಶಿ. ಬಸವನಾಳ ದತ್ತಿ ಕಾರ್ಯಕ್ರಮದಲ್ಲಿ ಬಸವನಾಳರ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿದರು.
ಬಸವನಾಳ ಕೆಎಲ್ಇ ಸಂಸ್ಥೆ ಸ್ಥಾಪಕ ಸಪ್ತರ್ಷಿಗಳಲ್ಲಿ ಒಬ್ಬರು. ಅವರು ಬಹುಭಾಷಾ ಪಂಡಿತರಾಗಿದ್ದರು. ವೀರಶೈವ ಲಿಂಗಾಯತ ಸಮುದಾಯದ ಏಳಿಗೆಗೆ ಹಗಲಿರುಳು ಶ್ರಮಿಸಿದ ಮಹಾನುಭಾವರು. ಅನೇಕ ಕೃತಿಗಳ ಸಂಪಾದನೆ ಮಾಡಿದ ಅವರು, ವಚನ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಸ್ಮರಣೀಯ. ಒಂದು ವಿಶ್ವ ವಿದ್ಯಾಲಯ ಮಾಡಲಾರದಷ್ಟು ಕೆಲಸವನ್ನು ಬಸವನಾಳ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ಬಸವನಾಳ ಹೆಸರಿನಿಂದ ದತ್ತಿ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಈ ಭಾಗದ ಜನ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೆಎಲ್ಇ ಸಂಸ್ಥೆ ಹುಟ್ಟಿಗೆ ಕಾರಣವಾದರು. ಇಂದು 312ಕ್ಕೂ ಹೆಚ್ಚು ಶಾಲೆ, ಕಾಲೇಜುಗಳನ್ನು ನಡೆಸುತ್ತಿದ್ದು, ಗುಣಮಟ್ಟದ ಶಿಣ ನೀಡುತ್ತಿದೆ.ಇಂತಹ ಮಹನೀಯರ ಸ್ಮರಣೆ ಮಾಡುವುದು ಪುಣ್ಯಕಾರ್ಯ ಎಂದರು.
ದತ್ತಿ ದಾನಿ ರವೀಂದ್ರ ಬಸವನಾಳ, ಡಾ. ಲಿಂಗರಾಜ ಹೊರಕೇರಿ, ಎಸ್.ಜಿ. ಪಾಟೀಲ, ಅಶೋಕ ಚಿಕ್ಕೋಡಿ, ಮೋಹನ ಪಾಟೀಲ, ವೀರೇಶ ಕೆಳಗೇರಿ, ಸಂತೋಷ ಕಂಠಿ, ಕೆಎಲ್ಇ ಪ್ರಾಧ್ಯಾಕರು, ಬಸವನಾಳ ಕುಟುಂಬಸ್ಥರು, ಇತರರು ಇದ್ದರು.
ವೀರೇಶ ಅಂಗಡಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ತುಂಗಳ ನಿರೂಪಿಸಿದರು. ವೀರಣ್ಣ ಒಡ್ಡಿನ ವಂದಿಸಿದರು.